ತುಮಕೂರು, ಆ.16: ತುಮಕೂರು ತಾಲ್ಲೂಕಿನ ಚಿಕ್ಕತೊಟ್ಲುಕೆರೆಯ ಹೊರವಲಯದಲ್ಲಿ ರಸ್ತೆ ಬದಿಯಲ್ಲಿ ಒಂದು ದಿನದ ನವಜಾತ ಹೆಣ್ಣು ಶಿಶುವಿನ ಮೃತದೇಹ ಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಮಗುವಿನ ಪೋಷಕರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಆಗಸ್ಟ್ 14 ರಂದು ಸ್ಥಳೀಯ ಗ್ರಾಮಸ್ಥರು ಮುಖ್ಯರಸ್ತೆ ಬದಿಯಲ್ಲಿ ಬಟ್ಟೆಯಲ್ಲಿ ಸುತ್ತಿಟ್ಟಿದ್ದ ನವಜಾತ ಶಿಶುವಿನ ಮೃತದೇಹವನ್ನು ಕಂಡು ಕೂಡಲೇ ಕೋರಾ ಪೊಲೀಸರಿಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದರು.
ಘಟನೆಯ ಮಾಹಿತಿ ಮಕ್ಕಳ ರಕ್ಷಣಾ ಘಟಕಕ್ಕೂ ತಲುಪಿದ ಬಳಿಕ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪವಿತ್ರಾ ಅವರ ಮಾರ್ಗದರ್ಶನದಲ್ಲಿ ಪರಿಶೀಲನೆ ನಡೆಸಲಾಯಿತು. ನಂತರ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಶಿವಣ್ಣ ಅವರು ತುಮಕೂರು ಮಹಿಳಾ ಠಾಣೆಗೆ ದೂರು ಸಲ್ಲಿಸಿದರು.
ದೂರಿನಲ್ಲಿ, ಮಗುವಿನ ಜನನವನ್ನು ಬಚ್ಚಿಡುವ ಉದ್ದೇಶದಿಂದ ನವಜಾತ ಶಿಶುವನ್ನು ರಸ್ತೆ ಬದಿಯಲ್ಲಿ ತಂದು ಎಸೆದಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಪ್ರಕರಣದ ನೈಜ ಸತ್ಯಾಂಶವನ್ನು ಪತ್ತೆಹಚ್ಚಿ, ಮಗುವಿನ ಪೋಷಕರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ತುಮಕೂರು ಮಹಿಳಾ ಠಾಣೆ ಪೊಲೀಸರು ಸುತ್ತಮುತ್ತಲಿನ ಆಸ್ಪತ್ರೆಗಳು, ಹೆರಿಗೆ ಕೇಂದ್ರಗಳು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ಮುಂದುವರಿಸಿದ್ದಾರೆ.
ಈ ನವಜಾತ ಶಿಶು ಯಾರಿಗೆ ಸೇರಿದ್ದು, ಇದನ್ನು ರಸ್ತೆ ಬದಿ ಎಸೆದು ಹೋಗಲು ನಿಜವಾದ ಕಾರಣವೇನು ಎಂದು ಶಿಶುವಿನ ತಂದೆ ತಾಯಿ ಪತ್ತೆಯಾದ ಬಳಿಕ ತಿಳಿದು ಬರಬೇಕಿದೆ. ಅಂತೆಯೇ ಈ ಶಿಶು ಹುಟ್ಟುವಾಗಲೇ ಸಾವನ್ನಪ್ಪಿತ್ತಾ ಅಥವಾ ಎಸೆದ ಬಳಿಕ ಸಾವನ್ನಪ್ಪಿದೆಯೇ ಎಂಬ ವಿಚಾರ ಕೂಡಾ ಬೆಳಕಿಗೆ ಬರಬೇಕಿದೆ. ಈ ಕುರಿತಂತೆ ಎಲ್ಲಾ ಮಾಹಿತಿ ಪೊಲೀಸರ ತನಿಖೆಯಿಂದ ಹೊರ ಬರಬೇಕಿದೆ.





