ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆಯ ಮೇಲೆ ಪ್ರಶ್ನೆಗಳನ್ನು ಎಬ್ಬಿಸುವ ಭಯಾನಕ ಘಟನೆ ಒಂದು ನಡೆದಿದೆ. ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ತಟ್ಟಗುಪ್ಪೆ ಗ್ರಾಮದ ಬಳಿ ರೌಡಿ ಶೀಟರ್ ‘ನಿಮ್ಹಾನ್ಸ್ ರಾಜ್’ ಮತ್ತು ಅವನ ಸಹಚರರು ಯುವಕನೊಬ್ಬನ ಮೇಲೆ ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಅಮಾನವೀಯ ಕೃತ್ಯವನ್ನು ವಿಡಿಯೋ ಮಾಡಿ ಸಂಭ್ರಮಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಘಟನೆಯ ವಿವರ : ಯುವಕನು ಕೈಮುಗಿದು ಕ್ಷಮೆಯಾಚಿಸಿದರೂ, ಕಾಲು ಹಿಡಿದು ಬೇಡಿಕೊಂಡರೂ ಕಿರಾತಕರು ಬಿಡಲಿಲ್ಲ. ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಗಾಯಗೊಳಿಸಿ, ಮದ್ಯ ಸುರಿದು ವಿಕೃತಿ ತೋರಿದ್ದಾರೆ. ಈ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಹಾಸ್ಯ ಮಾಡುವಂತೆ ನಡೆದುಕೊಂಡಿದ್ದಾರೆ. “ಇವರೇನು ಮನುಷ್ಯರೋ.. ರಾಕ್ಷಸರೋ..?” ಎಂಬ ಪ್ರಶ್ನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಎದ್ದಿವೆ.
ಕಗ್ಗಲೀಪುರ ಪೊಲೀಸರು ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ರಾಜ್ಯಾದ್ಯಂತ ರೌಡಿಗಳು, ಪುಂಡ-ಪೋಕರಿಗಳ ಅಟ್ಟಹಾಸ ಮೀರಿದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿದೆ. ಸಾಮಾನ್ಯರ ಜೀವನಕ್ಕೆ ಭಯ ಉಂಟಾಗುತ್ತಿರುವುದು ಗಂಭೀರ ವಿಷಯವಾಗಿದೆ.
ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಬೇಕು ಮತ್ತು ಇಂತಹ ಕೃತ್ಯಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂಬ ಒತ್ತಾಸೆಯೂ ಜೋರಾಗಿದೆ. ಈ ಘಟನೆಯು ಕರ್ನಾಟಕದಲ್ಲಿ ಅಪರಾಧದ ಹೆಚ್ಚಳಕ್ಕೆ ಸಾಕ್ಷಿಯಾಗಿದೆ.





