ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಮಲಮಗಳು ರನ್ಯಾ ರಾವ್ ಅವರ ಹೆಸರು ಕೇಳಿಬಂದ ನಂತರ ಕಡ್ಡಾಯ ರಜೆಗೆ ಕಳುಹಿಸಲ್ಪಟ್ಟಿದ್ದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಕೆ. ರಾಮಚಂದ್ರ ರಾವ್ ಅವರನ್ನು ಮರು ನೇಮಕ ಮಾಡಿ, ಕರ್ನಾಟಕ ಸರ್ಕಾರದ ಆದೇಶದ ಹೊರಡಿಸಿದೆ. ಅವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ (DCRE) ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ನಿಯುಕ್ತಿ ಮಾಡಲಾಗಿದೆ.
ಮಾರ್ಚ್‌ನಲ್ಲಿ ರನ್ಯಾ ರಾವ್ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14.2 ಕಿಲೋ (ಮೌಲ್ಯ ₹12.56 ಕೋಟಿ) ಚಿನ್ನ ಕಳ್ಳಸಾಗಣೆ ಮಾಡಲು ಯತ್ನಿಸಿ ಬಂಧಿತರಾದ ನಂತರ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ನೇತೃತ್ವದ ಸಮಿತಿ, ಡಿಜಿಪಿ ರಾಮಚಂದ್ರ ರಾವ್ ವಿರುದ್ಧ ಶಿಷ್ಟಾಚಾರ ವಿಚಾರಣೆ ನಡೆಸಿತ್ತು.
ವಿಚಾರಣೆಯ ಪ್ರಾಥಮಿಕ ವರದಿಯಲ್ಲಿ, ರನ್ಯಾ ರಾವ್ ಕಸ್ಟಮ್ಸ್ ತಪಾಸಣೆ ತಪ್ಪಿಸಲು ಪೊಲೀಸ್ ಬೆಂಗಾವಲು ಪಡೆಯ ದುರುಪಯೋಗ ಮಾಡಿದ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಪ್ರಕರಣದ ನಂತರ ಮಾರ್ಚ್ 15 ರಂದು ರಾವ್ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿತ್ತು.
ಸರ್ಕಾರದ ಇತ್ತೀಚಿನ ಆದೇಶದಲ್ಲಿ,ಡಿಜಿಪಿ (DCRE) ಹುದ್ದೆ, ಸಿಐಡಿ, ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ಮಹಾನಿರ್ದೇಶಕರ ಹುದ್ದೆಗೆ ಸಮಾನವಾದದ್ದು ಎಂದು ಸ್ಪಷ್ಟಪಡಿಸಲಾಗಿದೆ. ಈ ಹುದ್ದೆಗೆ ನೇಮಕಗೊಂಡಿರುವುದರಿಂದ, ರಾವ್‌ಗೆ ಮತ್ತೆ ಹಿರಿಯ ಮಟ್ಟದ ಆಡಳಿತ ಜವಾಬ್ದಾರಿ ವಹಿಸಲಾಗಿದೆ.
ರನ್ಯಾ ರಾವ್ ಅವರಿಗೆ ಮೇನಲ್ಲಿ ಜಾಮೀನು ದೊರೆತಿದ್ದರೂ, COFEPOSA ಕಾಯ್ದೆಯಡಿ ಒಂದು ವರ್ಷದವರೆಗೆ ಜಾಮೀನು ಸಿಗದ ಕಾರಣ ಅವರು ಇನ್ನೂ ಜೈಲಿನಲ್ಲಿದ್ದಾರೆ.