ಪ್ರೀತಿಯ ಹೆಸರಲ್ಲಿ ಏಳು ವರ್ಷಗಳ ಕಾಲ ಜೊತೆಯಾಗಿದ್ದು, ಮದುವೆಯಾದ ನಂತರ ಆರು ತಿಂಗಳ ಗರ್ಭಿಣಿ ಪತ್ನಿಯನ್ನು ಕೈಬಿಟ್ಟು ಮತ್ತೊಂದು ಮದುವೆಗೆ ಸಿದ್ಧತೆ ನಡೆಸುತ್ತಿರುವ ಪತಿಯ ವಿರುದ್ಧ ಯುವತಿಯೊಬ್ಬಳು ನ್ಯಾಯಕ್ಕಾಗಿ ಹೋರಾಡುತ್ತಿದ್ದಾಳೆ.
ತುಮಕೂರು ಪಾವಗಡ ತಾಲ್ಲೂಕಿನ ವೈ.ಎನ್. ಹೊಸಕೋಟೆಯ ಈ ಯುವತಿ ಕಾಲೇಜು ದಿನಗಳಲ್ಲಿ ಜೆರಾಕ್ಸ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಬೊಮ್ಮಾನಾಯಕ್ ಎಂಬುವರ ಪರಿಚಯವಾಗಿತ್ತು. ಪ್ಯಾನ್ ಕಾರ್ಡ್ ಮಾಡಿಸಲು ಹೋದಾಗ ಆರಂಭವಾದ ಸ್ನೇಹ ಪ್ರೀತಿಯಾಗಿ ಬೆಳೆಯಿತು. ಪೋಷಕರ ವಿರೋಧದ ನಡುವೆಯೂ ಪಾವಗಡದ ದೇವಸ್ಥಾನದಲ್ಲಿ ಇಬ್ಬರೂ ಮದುವೆಯಾಗಿದ್ದರು.
ಮದುವೆಯಾಗಿ ಒಂದೂವರೆ ವರ್ಷ ಸುಖದ ಸಂಸಾರ ನಡೆಸುತ್ತಿದ್ದಾಗ, ಬೊಮ್ಮಾನಾಯಕ್ ತನ್ನ ಪೋಷಕರ ಒತ್ತಾಯಕ್ಕೆ ಮಣಿದು ಗರ್ಭಿಣಿ ಪತ್ನಿಯನ್ನು ದೂರ ಮಾಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಆತನ ಕುಟುಂಬದವರು ಮತ್ತೊಂದು ಮದುವೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
“ನನಗೆ ನನ್ನ ಗಂಡ ಬೇಕು, ನನ್ನ ಮಗುವಿಗೆ ತಂದೆ ಬೇಕು” ಎಂದು ಆರು ತಿಂಗಳ ಗರ್ಭಿಣಿ ಯುವತಿ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾಳೆ. ತನ್ನ ಮೇಲೆ ಜಾತಿ ನಿಂದನೆ, ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಬೊಮ್ಮಾನಾಯಕ್, ಆತನ ತಾಯಿ ಕರಿಯಮ್ಮ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಸಂತ್ರಸ್ತೆ ತನ್ನ ಹಾಗೂ ಗರ್ಭದಲ್ಲಿರುವ ಮಗುವಿನ ಭವಿಷ್ಯಕ್ಕಾಗಿ ನ್ಯಾಯಾಲಯದ ಬಾಗಿಲು ಬಡಿದಿದ್ದಾಳೆ. ಈ ಪ್ರಕರಣ ಸ್ಥಳೀಯವಾಗಿ ಬಹಳ ಚರ್ಚೆಗೆ ಗ್ರಾಸವಾಗಿದೆ.





