ಮೈಸೂರು: ಮೈಸೂರಿನ ಡಿಆರ್‌ಸಿ ಮಾಲ್‌ನಲ್ಲಿ ಎಲೆಕ್ಟ್ರಿಷಿಯನ್ ಕೆಲಸದ ವೇಳೆ ಆಯತಪ್ಪಿ ನಾಲ್ಕನೇ ಮಹಡಿಯಿಂದ ಬಿದ್ದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಂಭೀರ ಗಾಯವಾಗಿದೆ. ಮೃತ ವ್ಯಕ್ತಿಯನ್ನು ಸುನೀಲ್ (27) ಎಂದು ಗುರುತಿಸಲಾಗಿದೆ.
ನಗರದ ಡಿಆರ್‌ಸಿ ಮಾಲ್‌ನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮೃತ ಸುನೀಲ್, ನಾಲ್ಕನೇ ಮಹಡಿಯಲ್ಲಿ ಬೋರ್ಡ್ ತೆರವುಗೊಳಿಸುವ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ಅವರು ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಮೇಲೆ ಕಾಲಿಟ್ಟಾಗ, ಆಯತಪ್ಪಿ ಕೆಳಗೆ ಕುಸಿದರು. ರಾಡ್‌ನ ಸಹಾಯದಿಂದ ನೇತಾಡುತ್ತಿದ್ದ ಸುನೀಲ್‌ನನ್ನು ರಕ್ಷಿಸಲು ಮುಂದಾದ ಚಂದ್ರು ಎಂಬಾತ ಕೂಡ ಪಿಒಪಿ ಮೇಲೆ ಕಾಲಿಟ್ಟು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ.
ಗಾಯಗೊಂಡ ಚಂದ್ರುವನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಸುನೀಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ಕುರಿತು ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





