ತುಮಕೂರು: ಕರ್ನಾಟಕ ರಾಜ್ಯ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಅವರು ಮೈಸೂರಿನಲ್ಲಿ ನಡೆಯಲಿರುವ ದಸರಾ ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ಕ್‌ರಿಂದ ಮಾಡಿಸುವ ಕುರಿತು ಯಾವುದೇ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದಸರಾ ಕರ್ನಾಟಕದ ನಾಡ ಹಬ್ಬವಾಗಿದ್ದು, ಚಾಮುಂಡೇಶ್ವರಿಯ ಮೂಲಕ ಮೈಸೂರು ದಸರಾವನ್ನು ಎಲ್ಲರೂ ಒಟ್ಟಾಗಿ ಆಚರಿಸುತ್ತೇವೆ ಎಂದು ತುಮಕೂರಿನಲ್ಲಿ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಅವರು ತಿಳಿಸಿದ್ದಾರೆ.
“ಬಾನು ಮುಷ್ತಾಕ್ ಕನ್ನಡಿಗರೇ ಆಗಿದ್ದಾರೆ. ಅವರಿಗೂ ಕನ್ನಡದ ಮೇಲೆ, ದೇವರ ಮೇಲೆ ಅಭಿಮಾನವಿದೆ. ನಾವು ಯಾವ ದೇವರನ್ನೂ ವಿರೋಧಿಸುವುದಿಲ್ಲ. ಎಲ್ಲಾ ದೇವರನ್ನು ನಮ್ಮವೆಂದು ಒಪ್ಪಿಕೊಂಡು, ದಸರಾ ಉದ್ಘಾಟನೆಗೆ ಯಾವುದೇ ಆಕ್ಷೇಪವಿಲ್ಲ,” ಎಂದು ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ. ಎಲ್ಲಾ ಧರ್ಮಗಳನ್ನು ಪ್ರೀತಿಯಿಂದ ಗೌರವಿಸಬೇಕು, ಎಲ್ಲಾ ದೇವರ ಮೇಲೆ ನಂಬಿಕೆ ಇಡಬೇಕು ಎಂದು ಪ್ರವೀಣ್ ಶೆಟ್ಟಿ ಒತ್ತಿ ಹೇಳಿದ್ದಾರೆ.
“ನಾವು ಭಾರತ ದೇಶದಲ್ಲಿದ್ದೇವೆ. ಜಾತ್ಯಾತೀತ ರಾಷ್ಟ್ರವಾಗಿ ಎಲ್ಲರೂ ಒಟ್ಟಿಗೆ ಬದುಕಬೇಕು. ಹಿಂದೂಗಳು ಇತರ ಧರ್ಮದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉದ್ಘಾಟನೆ ಮಾಡುವಂತೆ, ಇತರರೂ ದಸರಾದಂತಹ ಹಬ್ಬಗಳಲ್ಲಿ ಭಾಗಿಯಾಗಬಹುದು. ಕೆಲವೆಡೆ ಒಂದೇ ದರ್ಗಾದಲ್ಲಿ ಎರಡು ಧರ್ಮಗಳ ದೇವರನ್ನು ಕಾಣುತ್ತೇವೆ. ಆದ್ದರಿಂದ, ಇವರು ಬೇಡ, ಅವರು ಬೇಡ ಎನ್ನುವುದು ಸರಿಯಲ್ಲ,” ಎಂದು ಪ್ರವೀಣ್ ಶೆಟ್ಟಿ ಹೇಳಿದ್ದಾರೆ.
ಎಲ್ಲಾ ಧರ್ಮಗಳನ್ನೂ ಪ್ರೀತಿಸಿದರೆ ಮಾತ್ರ ವಿಶ್ವಮಾನವರಾಗಬಹುದು. ಕುವೆಂಪು ಅವರು ‘ಗುಡಿ, ಚರ್ಚ್, ಮಸೀದಿಗಳನ್ನು ಬಿಟ್ಟು ಹೊರಬನ್ನಿ’ ಎಂದಿದ್ದರು. ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡಬೇಕಾದರೆ, ಚಾಮುಂಡಿ ತಾಯಿ ಮತ್ತು ಕನ್ನಡಾಂಬೆಯ ಮೇಲೆ ಅಭಿಮಾನವಿಟ್ಟುಕೊಂಡು ಮಾಡಲಿ,” ಎಂದು ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ.





