ಪ್ರೀತಿ ಎನ್ನುವುದು ನಂಬಿಕೆಯ ಮೇಲೆ ನಿಂತಿರುತ್ತದೆ. ಆದರೆ ಮಂಡ್ಯ ಜಿಲ್ಲೆಯಲ್ಲಿ ನಡೆದ ಈ ಘಟನೆ ಮಾತ್ರ ಆ ನಂಬಿಕೆಗೆ ದೊಡ್ಡ ಪೆಟ್ಟು ನೀಡಿದೆ. ಪ್ರೀತಿಸಿ ಕೈಹಿಡಿದ ಗಂಡನನ್ನೇ ಬಿಟ್ಟು, ಆತನ ಆಪ್ತ ಗೆಳೆಯನ ಜೊತೆ ಓಡಿ ಹೋಗಿ ಎರಡನೇ ಮದುವೆಯಾಗಿರುವ ಯುವತಿಯ ಕಥೆ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.
ಮಂಡ್ಯ ಜಿಲ್ಲೆಯ ಬನ್ನಂಗಾಡಿ ಗ್ರಾಮದ ಆಟೋ ಚಾಲಕ ಸಾಗರ್ ಎಂಬುವವರು ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು. ಸುಮಾರು ಮೂರು ವರ್ಷಗಳ ಹಿಂದೆ ಆಕೆ ಪ್ರೀತಿಗಾಗಿ ಮನೆಯನ್ನು ತೊರೆದು ಸಾಗರ್ ಬಳಿ ಬಂದಿದ್ದಳು. ಆಕೆಗೆ 18 ವರ್ಷ ತುಂಬುವವರೆಗೆ ಕಾಯ್ದಿದ್ದ ಸಾಗರ್, ಕಾನೂನುಬದ್ಧವಾಗಿ ಆಕೆಯನ್ನು ಮದುವೆಯಾಗಿ ಸುಂದರ ಸಂಸಾರ ಆರಂಭಿಸಿದ್ದರು.
ಸಾಗರ್ ಮತ್ತು ಯುವತಿ ಸುಮಾರು ಒಂದೂವರೆ ವರ್ಷಗಳ ಕಾಲ ಸುಖವಾಗಿ ಸಂಸಾರ ನಡೆಸಿದ್ದರು. ಮನೆಯಲ್ಲಿ ಯಾವುದೇ ತೊಂದರೆ ಇರಲಿಲ್ಲ. ಆದರೆ, ಸಾಗರ್ ಅವರ ಆಪ್ತ ಸ್ನೇಹಿತ ಇಂದ್ರ ಎಂಬುವವನ ಪ್ರವೇಶದ ನಂತರ ಎಲ್ಲವೂ ಬದಲಾಯಿತು. ಸಾಗರ್ ಅವರನ್ನು ‘ಅಣ್ಣ’ ಎನ್ನುತ್ತಾ, ಅವರ ಪತ್ನಿಯನ್ನು ‘ತಂಗಿ’ ಎಂದು ಕರೆಯುತ್ತಿದ್ದರು ಆದರೆ ಒಳಗೊಳಗೆ ಬೇರೆಯದೇ ಸ್ಕೆಚ್ ಹಾಕಿದ್ದ.
ಸಾಗರ್ ಕೆಲಸಕ್ಕೆ ಹೋದ ಸಮಯದಲ್ಲಿ ಅವರ ಆಪ್ತ ಗೆಳೆಯ ಇಂದ್ರನ ಜೊತೆ ಯುವತಿ ಓಡಿ ಹೋಗಿದ್ದಾಳೆ. ಹೋಗುವಾಗ ಮನೆಯಲ್ಲಿದ್ದ 1 ಲಕ್ಷ ರೂಪಾಯಿ ನಗದು ಹಾಗೂ 22 ಗ್ರಾಂ ಚಿನ್ನಾಭರಣಗಳನ್ನು ಕದ್ದು ತೆಗೆದುಕೊಂಡು ಹೋಗಿದ್ದಾಳೆ. ಅಷ್ಟೇ ಅಲ್ಲದೆ, ಅವರಿಬ್ಬರು ದೇವಸ್ಥಾನವೊಂದರಲ್ಲಿ ಮದುವೆಯಾಗಿ, ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಸ್ಟೇಟಸ್‌ಗೆ ಹಾಕಿಕೊಂಡಿದ್ದಾರೆ. ಇದನ್ನು ನೋಡಿ ಸಾಗರ್ ಆಘಾತಕ್ಕೊಳಗಾಗಿದ್ದಾರೆ.
ನಂಬಿದ ಗೆಳೆಯ ಹಾಗೂ ಪ್ರೀತಿಸಿದ ಹೆಂಡತಿಯಿಂದ ಮೋಸಹೋದ ಸಾಗರ್ ಈಗ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. “ನನ್ನನ್ನು ಅಣ್ಣ ಎನ್ನುತ್ತಿದ್ದವನೇ ನನ್ನ ಸಂಸಾರಕ್ಕೆ ಬೆಂಕಿ ಇಟ್ಟಿದ್ದಾನೆ. ಅವರಿಬ್ಬರು ಎಲ್ಲಾದರೂ ಚೆನ್ನಾಗಿರಲಿ, ಆದರೆ ನನಗೆ ವಿಚ್ಛೇದನ (Divorce) ನೀಡಲಿ ಮತ್ತು ಮನೆಯಿಂದ ಕದ್ದೊಯ್ದ ಹಣ ಹಾಗೂ ಒಡವೆಗಳನ್ನು ವಾಪಸ್ ಕೊಡಲಿ” ಎಂದು ಸಾಗರ್ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾನೆ.





