ಮಂಡ್ಯ: ಮದ್ದೂರಿನ ರಾಮ್ ರಹೀಮ್ ನಗರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮಸೀದಿಯಿಂದ ಕಲ್ಲು ತೂರಾಟ ನಡೆದ ಘಟನೆಗೆ ಸಂಬಂಧಿಸಿ, ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿದ್ದು, ಸರ್ಕಾರದ ವೈಫಲ್ಯ ಮತ್ತು ಮತಾಂಧ ಶಕ್ತಿಗಳಿಗೆ ಬೆಂಬಲ ನೀಡುತ್ತಿರುವ ಧೋರಣೆಯಿಂದ ಇಂತಹ ಘಟನೆಗಳು ಸಂಭವಿಸುತ್ತಿವೆ ಎಂದು ಕಿಡಿಕಾರಿದ್ದಾರೆ.
ಭಾನುವಾರ ರಾತ್ರಿ ಮದ್ದೂರಿನ ಚನ್ನೇಗೌಡ ಬಡಾವಣೆಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ನಡೆಯುವಾಗ, ಕೆಮ್ಮಣ್ಣು ಕಾಲುವೆಯ ಬಳಿಯ ಮಸೀದಿಯಿಂದ ಕಲ್ಲು ತೂರಾಟ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದು, ಪೊಲೀಸರು 21 ಶಂಕಿತರನ್ನು ಬಂಧಿಸಿದ್ದಾರೆ. ಆದರೆ, ಈ ಘಟನೆಯ ನಂತರ ನಡೆದ ಪ್ರತಿಭಟನೆಯಲ್ಲಿ ಪೊಲೀಸರು ಭಕ್ತರ ಮೇಲೆ ಲಾಠಿ ಚಾರ್ಜ್ ಮಾಡಿದ್ದನ್ನು ಖಂಡಿಸಿದ ಬಿಜೆಪಿ ಸಂಸದ ಜೋಶಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಜೋಶಿ, “ಮದ್ದೂರಿನ ಘಟನೆ ಖಂಡನೀಯ. ಸರ್ಕಾರ ಮುನ್ನೆಚ್ಚರಿಕೆ ವಹಿಸದ ಕಾರಣ ಇಂತಹ ಘಟನೆಗಳು ನಡೆಯುತ್ತಿವೆ. ಕಾಂಗ್ರೆಸ್ ಸರ್ಕಾರ ಮತಾಂಧ ಶಕ್ತಿಗಳಿಗೆ ಬೆಂಬಲ ನೀಡುತ್ತಿದ್ದು, ಪಿಎಫ್‌ಐ ಸಂಘಟನೆಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ಪಡೆದಿರುವುದರಿಂದ ದುಷ್ಕರ್ಮಿಗಳ ಧೈರ್ಯ ಹೆಚ್ಚಾಗಿದೆ,” ಎಂದು ಕಿಡಿಕಾರಿದ್ದಾರೆ. “ಕಾಂಗ್ರೆಸ್ ಸರ್ಕಾರವೆಂದರೆ ಮುಸ್ಲಿಂರ ಸರ್ಕಾರ ಎಂಬ ರೀತಿಯಲ್ಲಿ ವರ್ತಿಸುತ್ತಿದೆ,” ಎಂದು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ದಾರ್ಷ್ಟ್ಯತನ ಮಿತಿಮೀರಿದೆ. ಗಣಪತಿ ಹಬ್ಬ, ಹಿಂದೂ ಧಾರ್ಮಿಕ ಹಬ್ಬಗಳು ಅಂದರೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲದ ದ್ವೇಷ. ನಿಮ್ಮ ದುರಾಡಳಿತದಿಂದಲೇ ರಾಜ್ಯದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ. ಗಣಪತಿ ಹಬ್ಬದ ಮೇಲೆ ನಿಯಂತ್ರಣ ಸಾಧಿಸುವಷ್ಟು ಹಠ ನಿಮಗೆ ಯಾಕೆ @siddaramaiah ನವರೇ? ಅಶಾಂತಿ ಸೃಷ್ಟಿಸಿ, ಲಾಠಿ ಚಾರ್ಜ್ ಮಾಡುವ… pic.twitter.com/yUEEs19mDF
— Pralhad Joshi (@JoshiPralhad) September 8, 2025
ಭಕ್ತರ ಮೇಲಿನ ಲಾಠಿ ಚಾರ್ಜ್‌ಗೆ ಜೋಶಿ ಗರಂ
“ಗಣೇಶ ಹಬ್ಬದ ಸಂದರ್ಭದಲ್ಲಿ ನೂರಾರು ನಿಯಮಗಳನ್ನು ಹೇರಲಾಗುತ್ತದೆ. ಧಾರವಾಡದಲ್ಲಿ ಎರಡು ಗಣಪತಿ ಮೂರ್ತಿಗಳು ಎದುರು ಬದುರಾದ ಕಾರಣ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಭಕ್ತರ ಮೇಲೆ ಲಾಠಿ ಪ್ರಹಾರ ಯಾಕೆ? ಇಂತಹ ಕೃತ್ಯಗಳು ಮುಂದುವರಿದರೆ ನಾವು ಉಗ್ರ ಹೋರಾಟ ನಡೆಸುತ್ತೇವೆ. ನಾನೇ ಸ್ಥಳಕ್ಕೆ ಭೇಟಿ ನೀಡಿ, ಏನಾಗುತ್ತದೆ ಎಂದು ನೋಡುತ್ತೇನೆ,” ಎಂದು ಜೋಶಿ ಎಚ್ಚರಿಕೆ ನೀಡಿದ್ದಾರೆ.
ಎಕ್ಸ್‌ನಲ್ಲಿ ತಮ್ಮ ಪೋಸ್ಟ್‌ನಲ್ಲಿ ಜೋಶಿ, “ಕಾಂಗ್ರೆಸ್ ಸರ್ಕಾರದ ದಾರ್ಷ್ಟ್ಯತನ ಮಿತಿಮೀರಿದೆ. ಗಣಪತಿ ಹಬ್ಬದಂತಹ ಹಿಂದೂ ಧಾರ್ಮಿಕ ಆಚರಣೆಗಳ ಮೇಲೆ ದ್ವೇಷ ಯಾಕೆ? ಸಿದ್ದರಾಮಯ್ಯನವರೇ, ಗಣೇಶ ವಿಸರ್ಜನೆಯ ಮೇಲೆ ನಿಯಂತ್ರಣ ಹೇರಿ, ಅಶಾಂತಿ ಸೃಷ್ಟಿಸಿ, ಲಾಠಿ ಚಾರ್ಜ್ ಮಾಡುವ ಉದ್ದೇಶವೇನು? ಕಲ್ಲು ತೂರಿದವರು ಅಮಾಯಕರೇ? ಭಕ್ತರ ಮೇಲೆ ಲಾಠಿ ಚಾರ್ಜ್ ಯಾಕೆ? ಪ್ರಶ್ನಿಸಿದ್ದಾರೆ.
ಮದ್ದೂರಿನ ಘಟನೆಯಿಂದ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು, ಸೋಮವಾರದ ಪ್ರತಿಭಟನೆಯ ವೇಳೆ ಮತ್ತೆ ಕಲ್ಲು ತೂರಾಟ ಸಂಭವಿಸಿದೆ. ಪೊಲೀಸರು ಲಾಠಿ ಚಾರ್ಜ್‌ನಿಂದ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಸದ್ಯ ಮಂಗಳವಾರ ಬೆಳಗ್ಗೆವರೆಗೆ ಮದ್ದೂರಿನಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ.