ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಯರದಕಟ್ಟೆ ಗ್ರಾಮದಲ್ಲಿ ಸಿಡಿಲು ಬಡಿದ ಪರಿಣಾಮ ಗುಡಿಸಲೊಂದು ಸಂಪೂರ್ಣ ಭಸ್ಮವಾದ ಘಟನೆ ನಡೆದಿದೆ.
ಮಂಜುನಾಥ್ ಎಂಬುವರಿಗೆ ಸೇರಿದ ಗುಡಿಸಲಿನ ಮೇಲೆ ಸಿಡಿಲು ಬಡಿದಿದೆ. ಘಟನೆಯ ಸಂದರ್ಭದಲ್ಲಿ ಮಂಜುನಾಥ್ ಕಡಲೆ ಬಣವಿಗೆ ಟಾರ್ಪಾಲಿನ್ ಹಾಕಲು ಹೊರಗೆ ಬಂದಿದ್ದರು. ಅವರು ಹೊರಗೆ ಬಂದ ಕೆಲವೇ ಕ್ಷಣಗಳಲ್ಲಿ ಸಿಡಿಲು ಬಡಿದಿದೆ. ಅದೃಷ್ಟವಶಾತ್, ಮಂಜುನಾಥ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗುಡಿಸಲಿನಲ್ಲಿ ಇರಿಸಲಾಗಿದ್ದ ಮೂರು ಲಕ್ಷ ರೂಪಾಯಿ ನಗದು, ದವಸ ಧಾನ್ಯಗಳು ವೈಯಕ್ತಿಕ ಬಳಕೆಯ ಮೊಬೈಲ್ ಫೋನ್, ಜಮೀನು ಮತ್ತು ಮನೆ ನಿರ್ಮಾಣಕ್ಕೆ ಸಂಬಂಧಿಸಿದ ದಾಖಲೆಗಳು ಸಂಪೂರ್ಣ ಭಸ್ಮವಾಗಿವೆ.
ಗ್ರಾಮ ಪಂಚಾಯಿತಿಯಿಂದ ಮಂಜುನಾಥ್‌ಗೆ ಮನೆ ನಿರ್ಮಾಣಕ್ಕೆ ಅನುಮತಿ ದೊರೆತಿತ್ತು. ಅವರು ಮನೆ ಕಟ್ಟುವ ಸಿದ್ಧತೆಯಲ್ಲಿದ್ದರು. ಆದರೆ, ಈ ಘಟನೆಯಿಂದ ಅವರಿಗೆ ಭಾರೀ ಆರ್ಥಿಕ ನಷ್ಟವಾಗಿದೆ. ಘಟನೆಯ ಸ್ಥಳಕ್ಕೆ ಗ್ರಾಮ ಲೆಕ್ಕಿಗರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಿಡಿಲು ಬಡಿದು ಬೊಲೆರೊ ವಾಹನ ಭಸ್ಮ
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಾಣದಾಳ ಗ್ರಾಮದಲ್ಲಿ ಸಿಡಿಲು ಬಡಿದ ಪರಿಣಾಮ ಬೊಲೆರೊ ಪಿಕ್-ಅಪ್ ವಾಹನವೊಂದು ಸಂಪೂರ್ಣ ಭಸ್ಮವಾದ ಘಟನೆ ನಡೆದಿದೆ.
ನಿನ್ನೆ ಸಂಜೆ ರಾಯಚೂರು ಜಿಲ್ಲೆಯ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗಿತ್ತು. ಈ ವೇಳೆ ಗಾಣದಾಳ ಗ್ರಾಮದಲ್ಲಿ ಹನಮಂತರಾಯ ಎಂಬುವರಿಗೆ ಸೇರಿದ ಬೊಲೆರೊ ಪಿಕ್-ಅಪ್ ವಾಹನದ ಮೇಲೆ ಸಿಡಿಲು ಬಡಿದು ವಾಹನ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಹನಮಂತರಾಯ ತಮ್ಮ ಜಮೀನಿನಲ್ಲಿ ತೆಂಗಿನ ಮರಗಳ ಪಕ್ಕದಲ್ಲಿ ಬೊಲೆರೊ ವಾಹನವನ್ನು ನಿಲ್ಲಿಸಿದ್ದರು. ಮಳೆ ಮತ್ತು ಗಾಳಿಯ ವೇಳೆ ವಾಹನದ ಬಳಿ ಶ್ರೀಧರ್, ಗೋಪಾಲ್ ಸೇರಿದಂತೆ ನಾಲ್ವರು ಜನರು ನಿಂತಿದ್ದರು. ಈ ಸಂದರ್ಭದಲ್ಲಿ ಮೊದಲು ತೆಂಗಿನ ಮರಕ್ಕೆ ಸಿಡಿಲು ಬಡಿದಿದ್ದು, ನಂತರ ಬೊಲೆರೊ ವಾಹನಕ್ಕೆ ಸಿಡಿಲು ತಾಗಿದೆ. ಕೆಲವೇ ಕ್ಷಣಗಳಲ್ಲಿ ವಾಹನ ಹೊತ್ತಿ ಉರಿಯಿತು.
ವಾಹನದ ಬಳಿ ನಿಂತಿದ್ದ ಶ್ರೀಧರ್, ಗೋಪಾಲ್ ಸೇರಿದಂತೆ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಈ ಘಟನೆ ಜಾಲಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳೀಯ ಪೊಲೀಸರು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.





