ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಜಾತಿ ನಿಂದನೆ ಆರೋಪದಡಿ ಕೊಡಿಗೇಹಳ್ಳಿ ಠಾಣೆ ಪೊಲೀಸರು ವಕೀಲ ಕೆ.ಎನ್. ಜಗದೀಶ್ ಕುಮಾರ್ ಅವರನ್ನು ಬಂಧಿಸಿದ್ದಾರೆ.
ಮಂಜುನಾಥ್ ಎಂಬ ವ್ಯಕ್ತಿಯ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 196 ಮತ್ತು 299ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಬಂಧನದ ನಂತರ ಜಗದೀಶ್ ಅವರನ್ನು ಠಾಣೆಗೆ ಕರೆತಂದು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಈ ಹಿಂದೆ, ಆಗಸ್ಟ್ 21ರಂದು ಕೊಡಿಗೇಹಳ್ಳಿ ಪೊಲೀಸರು ಜಗದೀಶ್ ಅವರಿಗೆ ನೋಟಿಸ್ ನೀಡಲು ಮನೆಗೆ ತೆರಳಿದ್ದಾಗ, ಅವರು ಬಾಗಿಲು ತೆರೆಯದೆ ಸಹಕರಿಸಿರಲಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ ಜಗದೀಶ್, “ನಾನು ಮನೆಯಲ್ಲಿ ಇಲ್ಲದಿರುವಾಗ ಕೊಡಿಗೇಹಳ್ಳಿ ಪೊಲೀಸರು ಯಾವುದೇ ನೋಟಿಸ್ ನೀಡದೆ ಮನೆಗೆ ಬಂದಿದ್ದಾರೆ.
ಅನಧಿಕೃತವಾಗಿ ಕಾಂಪೌಂಡ್ ಜಿಗಿದು, ನಮ್ಮ ಕುಟುಂಬದವರನ್ನು ಭಯಪಡಿಸಲು ಪ್ರಯತ್ನಿಸಿದ್ದಾರೆ. ನಾಯಿಗಳಿಗೆ ಮಂಪರು ಔಷಧಿ ನೀಡಲಾಗಿದೆ ಎಂದು ಆರೋಪಿಸಿದ್ದಾರೆ” ಎಂದು ದೂರಿದ್ದರು. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.