ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಯುವತಿಗೆ 25 ಲಕ್ಷ ರೂಪಾಯಿ ನೀಡಿ ಮೋಸ ಹೋಗಿರುವ ಘಟನೆ ಗದಗ ಜಿಲ್ಲೆಯ ರೋಣದಲ್ಲಿ ನಡೆದಿದೆ. ಈ ವಿಚಾರವಾಗಿ ದೂರು ನೀಡಲು ಪೊಲೀಸ್ ಠಾಣೆಗೆ ಬಂದ ವ್ಯಕ್ತಿಯನ್ನು ರೋಣ ಸಿಪಿಐ ಸಿದ್ದಪ್ಪ ಬೀಳಗಿ ಬೆದರಿಸಿ, 15 ಲಕ್ಷ ರೂಪಾಯಿ ಬೇಡಿಕೆ ಇಟ್ಟಿರುವ ಗಂಭೀರ ಆರೋಪ ಕೇಳಿಬಂದಿದೆ.
ಗಜೇಂದ್ರಗಡದ ರಾಘವೇಂದ್ರ ರಾಠೋಡ ಎಂಬಾತ ಸಿಪಿಐ ಸಿದ್ದಪ್ಪ ಬೀಳಗಿ ವಿರುದ್ಧ ಈ ಆರೋಪ ಮಾಡಿದ್ದಾರೆ. ಆರೋಪದ ಪ್ರಕಾರ, ಸಿಪಿಐ ಈಗಾಗಲೇ ಬೆದರಿಕೆಯ ಮೂಲಕ 3 ಲಕ್ಷ ರೂಪಾಯಿ ವಸೂಲಿ ಮಾಡಿದ್ದು, ಉಳಿದ ಹಣಕ್ಕಾಗಿ ನಿರಂತರ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಗದಗ ಎಸ್‌ಪಿ ಕಚೇರಿಗೆ ಲಿಖಿತ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ರಾಘವೇಂದ್ರ ಆರೋಪಿಸಿದ್ದಾರೆ. ಸಿಪಿಐನ ಕಿರುಕುಳದಿಂದ ಕಂಗಾಲಾಗಿದ್ದಾರೆ.
ರಾಘವೇಂದ್ರ ರಾಠೋಡಗೆ ಇನ್ಸ್ಟಾಗ್ರಾಮ್‌ನಲ್ಲಿ ಓರ್ವ ಯುವತಿ ಪರಿಚಯವಾಗಿದ್ದಾಳೆ. ದಿನಗಳು ಕಳೆದಂತೆ ಈ ಪರಿಚಯವು ಪ್ರೀತಿಯಾಗಿ ಬದಲಾಗಿತ್ತು. ಬಳಿಕ ಯುವತಿ ತನ್ನ ಕಷ್ಟಗಳನ್ನು ಹೇಳಿಕೊಂಡಾಗ, ರಾಘವೇಂದ್ರ ಹಂತಹಂತವಾಗಿ ಒಟ್ಟು 25 ಲಕ್ಷ ರೂಪಾಯಿ ನೀಡಿದ್ದಾರೆ. ಆದರೆ, ಹಣ ವಾಪಸ್ ಕೇಳಿದಾಗ ಯುವತಿ ನೀಡಲಿಲ್ಲ. ಇದರಿಂದ ಮನನೊಂದ ರಾಘವೇಂದ್ರ ಆತ್ಮಹತ್ಯೆಗೆ ಯತ್ನಿಸಿದ್ದರು.
ತನಿಖೆ ನಡೆಸಿದಾಗ ಹಣ ಪಡೆದ ಯುವತಿ ಸಿಪಿಐ ಸಿದ್ದಪ್ಪ ಬೀಳಗಿಯ ಸಂಬಂಧಿಕಳಾಗಿದ್ದಾಳೆ. ಈ ವಿಚಾರವಾಗಿ ದೂರು ನೀಡಲು ರೋಣ ಪೊಲೀಸ್ ಠಾಣೆಗೆ ಬಂದ ರಾಘವೇಂದ್ರರನ್ನು ಸಿಪಿಐ ಬೆದರಿಸಿ, ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪವಿದೆ. “ನನ್ನ ಮೇಲೆ ನಡೆದ ಹಲ್ಲೆಯ ದೃಶ್ಯ ಠಾಣೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಆ ದೃಶ್ಯಗಳನ್ನು ನೀಡುವಂತೆ ಕೇಳಿದ್ದೇನೆ. ಆಗ ಸಿಪಿಐ, ‘ನಿನ್ನ ಮೇಲೆ ರೇಪ್ ಕೇಸ್ ಹಾಕಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದಾರೆ,” ಎಂದು ರಾಘವೇಂದ್ರ ಆರೋಪಿಸಿದ್ದಾರೆ.
ಗದಗ ಎಸ್‌ಪಿ ಬಿ.ಎಸ್. ನೇಮಗೌಡ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದು, “ಈ ವಿಷಯದ ಬಗ್ಗೆ ಮಾಹಿತಿ ಪಡೆದಿದ್ದೇವೆ. ಸಿಪಿಐ ಬೆದರಿಕೆ ಹಾಕಿ ಲಂಚ ಪಡೆದಿರುವ ಆರೋಪ ಸುಳ್ಳು. ರಾಘವೇಂದ್ರ, ಯುವತಿಗೆ ನೀಡಿದ ಹಣವನ್ನು ವಾಪಸ್ ಕೊಡಿಸುವಂತೆ ನಮ್ಮ ಅಧಿಕಾರಿಗಳನ್ನು ಒತ್ತಾಯಿಸಿದ್ದರು. ಹಣ ಕೊಡಿಸದ ಕಾರಣ ಅಧಿಕಾರಿಗಳ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ನರಗುಂದ ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು. ಒಂದು ವೇಳೆ ಸಿಪಿಐ ಬೆದರಿಕೆ ಹಾಕಿ ಲಂಚ ಪಡೆದಿರುವುದು ಸಾಬೀತಾದರೆ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದ್ದಾರೆ.