ಖ್ಯಾತ ಸಂಗೀತ ಸಂಯೋಜಕ ಇಳಯರಾಜ ಕೊಲ್ಲೂರು ಮೂಕಾಂಬಿಕೆಯ ಭಕ್ತ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಮೂಕಾಂಬಿಕೆಗೆ ಬರೋಬ್ಬರಿ 4 ಕೋಟಿ ರೂಪಾಯಿ ದುಬಾರಿ ಬೆಲೆಯ ವಜ್ರದ ಕಿರೀಟ ಮಾಡಿಸಿ, ಅರ್ಪಿಸಿದ್ದಾರೆ ಅನ್ನೋದು ಲೇಟೆಸ್ಟ್ ಸುದ್ದಿ. ಈ ಕುರಿತ ಒಂದು ಡಿಟೈಲ್ಸ್ ಇಲ್ಲಿದೆ.
- ಕೊಲ್ಲೂರು ಮೂಕಾಂಬಿಕೆಗೆ 4 ಕೋಟಿ ವಜ್ರದ ಕಿರೀಟ ಗಿಫ್ಟ್
- ಸ್ವರ ಮಾಂತ್ರಿಕ ಇಳಯರಾಜ ನೀಡಿದ ದುಬಾರಿ ಉಡುಗೊರೆ
- ಮೂಕಾಂಬಿಕೆಯೇ ಎಲ್ಲಾ.. ಆಕೆಗಾಗಿ ಸರ್ವಸ್ವವೇ ಮುಡಿಪು
- ಕೊಲ್ಲೂರು ದೇವಿಯ ಬಹುದೊಡ್ಡ ಭಕ್ತ ಈ ಇಳಯರಾಜ..!
ಕೊಲ್ಲೂರು ಮೂಕಾಂಬಿಕೆ ದೇವಾಲಯ ನಮ್ಮ ಕರ್ನಾಟಕದ ಭಕ್ತಿ ಪ್ರಧಾನ ಕೇಂದ್ರಗಳಲ್ಲೊಂದು. ಅಲ್ಲಿರೋ ಮೂಕಾಂಬಿಕಾ ದೇವಿಯ ಶಕ್ತಿ ತುಂಬಾ ಪವರ್‌ಫುಲ್. ಇಲ್ಲಿಗೆ ಬರೀ ನಮ್ಮ ಕನ್ನಡಿಗರಷ್ಟೇ ಅಲ್ಲ, ಪರಭಾಷೆಗಳಿಂದ ದೊಡ್ಡ ದೊಡ್ಡ ರಾಜಕಾರಣಿಗಳು ಹಾಗೂ ಸೂಪರ್ ಸ್ಟಾರ್‌ಗಳೆಲ್ಲಾ ಬಂದು, ದೇವಿಯ ದರ್ಶನ ಪಡೆದು, ಆಕೆಯ ಕೃಪೆಗೆ ಪಾತ್ರರಾಗ್ತಾರೆ. ಅದರಲ್ಲೂ ತಮಿಳಿನ ಸ್ವರ ಮಾಂತ್ರಿಕ ಇಳಯರಾಜ ಕೊಲ್ಲೂರು ಮೂಕಾಂಬಿಕಗೆ ಬಹುದೊಡ್ಡ ಭಕ್ತ.
ವರ್ಷಕ್ಕೆ ಕನಿಷ್ಟ ಎರಡು ಮೂರು ಬಾರಿ ಕೊಲ್ಲೂರಿಗೆ ಆಗಮಿಸುವ ಇಸೈಜ್ಞಾನಿ ಇಳಯರಾಜ, ನನ್ನ ಜೀವನದಲ್ಲಿ ಏನೂ ಇರಲಿಲ್ಲ. ಆ ದೇವಿಯಿಂದ ನನ್ನ ಜೀವನದಲ್ಲಿ ಪವಾಡವೇ ನಡೆದಿದೆ. ಎಲ್ಲವೂ ದೈವಿಕ. ತಾಯಿ ಮೂಕಾಂಬಿಕೆಯ ಕೃಪೆ ಹಾಗೂ ಆಶೀರ್ವಾದದಿಂದ ನಡೆದಿದೆ ಅಂತ ಸಾಕಷ್ಟು ಬಾರಿ ಇಳಯರಾಜ ಆ ದೇವಿಯ ಬಗ್ಗೆ ಭಕ್ತಿ ಹೊರಹಾಕಿದ್ದುಂಟು. ಸದ್ಯ ಮೂಕಾಂಬಿಕೆಗೆ ಸುಮಾರು 4 ಕೋಟಿಗೂ ಅಧಿಕ ರೂಪಾಯಿಗಳಷ್ಟು ದುಬಾರಿ ಮೊತ್ತದ ವಜ್ರದ ಕಿರೀಟ ಮಾಡಿಸಿ, ದೇವಿಗೆ ಅರ್ಪಿಸಿದ್ದಾರೆ.
ಅಷ್ಟೇ ಅಲ್ಲ, ಆಭರಣ ಅರ್ಪಿಸುವ ಮುನ್ನ ದೇವಾಲಯದಲ್ಲಿ ಮೆರವಣಿಗೆ ಕೂಡ ಮಾಡಲಾಗಿದೆ. ಕೋಟ್ಯಂತರ ರೂಪಾಯಿ ಆಭರಣಗಳನ್ನು ಅರ್ಪಿಸಿ, ಭಾವುಕರಾಗಿದ್ದಾರೆ ಇಳಯರಾಜ. ಅಂದಹಾಗೆ ಅವರು ಈ ರೀತಿ ದೇವಿಗೆ ಆಭರಣಗಳನ್ನು ಅರ್ಪಿಸ್ತಿರೋದು ಇದೇ ಮೊದಲಲ್ಲ. ಈ ಹಿಂದೆಯೂ ಕೂಡ ವಿನ್ನ, ವಿಭಿನ್ನ ಆಭರಣಗಳನ್ನ ನೀಡಿ, ಭಕ್ತಿಯ ಪರಾಕಾಷ್ಟೆ ಮೆರೆದಿದ್ದರು. ಸದ್ಯ ದೇವಿಗೆ ವಜ್ರದ ಕಿರೀಟ, ವೀರಭದ್ರನಿಗೆ ರಜತ ಕಿರೀಟ ಮತ್ತು ಖಡ್ಗ ಸಮರ್ಪಿಸಿದ್ದಾರೆ.
ಈ ವೇಳೆ ದೇಗುಲದ ಆಡಳಿತ ಮಂಡಳಿ ಹಾಗೂ ಅರ್ಚಕರು ಕೂಡ ಭಾಗಿಯಾಗಿ, ಇಳಯರಾಜ ಭಕ್ತಿಯನ್ನ ಕೊಂಡಾಡಿದ್ದಾರೆ. ಅಲ್ಲದೆ, ಅವರನ್ನ ಗೌರವಿಸಿ ಕಳುಹಿಸಿಕೊಟ್ಟಿದ್ದಾರೆ. ಇಳಯರಾಜಗೆ ಅವ್ರ ಮಗ ಕಾರ್ತಿಕ್, ಮೊಮ್ಮಗ ಯತೀಶ್ ಕೂಡ ಸಾಥ್ ನೀಡಿದ್ರು. ಇತ್ತೀಚೆಗೆ ಯುವ ದಸರಾದಲ್ಲಿ ಕನ್ನಡದ ರೆಟ್ರೋ ಹಾಡುಗಳನ್ನ ಹಾಡಿ, ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಇಳಯರಾಜ, ಈ ಬಾರಿ ದಸರಾಗೂ ಮೊದಲೇ ಮೂಕಾಂಬಿಕೆಗೆ ದುಬಾರಿ ಗಿಫ್ಟ್ ನೀಡಿ ಗಮನ ಸೆಳೆದಿದ್ದಾರೆ.