ಹಾವೇರಿ: ಜಿಲ್ಲೆಯ ಸವಣೂರು ತಾಲೂಕಿನ ಮೆಳಗಟ್ಟಿ ಗ್ರಾಮದಲ್ಲಿ ವಯೋವೃದ್ಧ ದಂಪತಿಯೊಂದಿಗೆ ಮಾನಸಿಕ ಅಸ್ವಸ್ಥ ಮಗನನ್ನು ಖಾಸಗಿ ಬ್ಯಾಂಕ್ ಸಿಬ್ಬಂದಿ ಯಾವುದೇ ಮುನ್ಸೂಚನೆಯಿಲ್ಲದೇ ಮನೆಯಿಂದ ಹೊರಗೆ ಹಾಕಿ, ಮನೆಗೆ ಬೀಗ ಹಾಕಿದ್ದಾರೆ. ಈ ಕಾರಣದಿಂದ ಕುಟುಂಬವು ಬೀದಿಗೆ ಬಿದ್ದಿದ್ದು, ಸ್ಥಳೀಯರಲ್ಲಿ ತೀವ್ರ ಆಕ್ರೋಶವನ್ನುಂಟು ಮಾಡಿದೆ.
ಸಹದೇವಪ್ಪ ಕೊಳೂರು (60) ಮತ್ತು ಅವರ ಪತ್ನಿ ಗಿರೀಜವ್ವ ಅವರು ತಮ್ಮ ಮಗಳ ಮದುವೆ ಮತ್ತು ಮನೆ ನಿರ್ಮಾಣಕ್ಕಾಗಿ ಎರಡೂವರೆ ವರ್ಷಗಳ ಹಿಂದೆ ಖಾಸಗಿ ಬ್ಯಾಂಕ್‌ನಿಂದ ಗೃಹಸಾಲ ಪಡೆದಿದ್ದರು. ಒಂದೂವರೆ ವರ್ಷಗಳ ಕಾಲ ಕೂಲಿ ಕೆಲಸ ಮಾಡಿ ಸಾಲದ ಕಂತುಗಳನ್ನು ಕಟ್ಟಿದ್ದರು. ಆದರೆ, ಸಹದೇವಪ್ಪ ಅವರು ಕಟ್ಟಡ ಕೆಲಸದ ವೇಳೆ ಮೇಲಿಂದ ಬಿದ್ದು ಕಾಲು ಮುರಿತಕ್ಕೊಳಗಾದರು, ಇದರಿಂದ ಅವರ ಆದಾಯದ ಮೂಲ ಕಡಿತಗೊಂಡಿತು.ಕುಟುಂಬದ ಏಕೈಕ ಆದಾಯದ ಮೂಲವಾಗಿದ್ದ ಗಿರೀಜವ್ವ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಗನ ಜೊತೆಗೆ ಕುಟುಂಬವನ್ನು ಸಾಕಲು ಹೆಣಗಾಡುತ್ತಿದ್ದರು. ಕಳೆದ 6-7 ತಿಂಗಳಿಂದ ಸಾಲದ ಕಂತುಗಳನ್ನು ಕಟ್ಟಲಾಗಿಲ್ಲ. ಮೂರು ತಿಂಗಳ ಹಿಂದೆ ಬ್ಯಾಂಕ್ ಸಿಬ್ಬಂದಿ, “ಸಾಲ ಕಟ್ಟದಿದ್ದರೆ ಮನೆ ಸೀಜ್ ಮಾಡುತ್ತೇವೆ,” ಎಂದು ಎಚ್ಚರಿಕೆ ನೀಡಿದ್ದರಾದರೂ, ಯಾವುದೇ ಔಪಚಾರಿಕ ನೋಟಿಸ್ ನೀಡದೇ ಏಕಾಏಕಿ ಮನೆಯನ್ನು ಸೀಜ್ ಮಾಡಿದ್ದಾರೆ.
ಸಹದೇವಪ್ಪ, ಗಿರೀಜವ್ವ ಮತ್ತು ಅವರ ಮಾನಸಿಕ ಅಸ್ವಸ್ಥ ಮಗನಿರುವ ಕುಟುಂಬವು ಈಗ ಬೀದಿಯಲ್ಲಿ ಆಶ್ರಯ ಪಡೆದಿದೆ. “ದುಡಿಯುವ ಶಕ್ತಿಯಿದ್ದಾಗ ಸಾಲ ಕಟ್ಟಿದ್ದೆವು. ಈಗ ಗಂಡನ ಕಾಲು ಮುರಿದು ಮನೆಯಲ್ಲೇ ಇದ್ದಾನೆ, ಮಗನಿಗೆ ಮಾನಸಿಕ ಅಸ್ವಸ್ಥತೆ. ನಾನೊಬ್ಬಳೇ ದುಡಿದು ಕುಟುಂಬ ಸಾಕುತ್ತಿದ್ದೇನೆ,” ಎಂದು ಗಿರೀಜವ್ವ ಕಣ್ಣೀರಿಟ್ಟಿದ್ದಾರೆ.
ಸ್ಥಳೀಯರ ಆಕ್ರೋಶ
“ಬ್ಯಾಂಕ್ ಯಾವುದೇ ಔಪಚಾರಿಕ ನೋಟಿಸ್ ಇಲ್ಲದೇ ಕುಟುಂಬವನ್ನು ಹೊರಗೆ ಹಾಕಿರುವುದು ಮಾನವೀಯತೆಗೆ ವಿರುದ್ಧ. ಜಿಲ್ಲಾಡಳಿತವು ಈ ಕುಟುಂಬಕ್ಕೆ ತಕ್ಷಣ ಸೂಕ್ತ ಆಶ್ರಯ ಕಲ್ಪಿಸಬೇಕು. ಗ್ರಾಮಸ್ಥರು ಊಟ ನೀಡುತ್ತಿದ್ದಾರೆ, ಆದರೆ ಇದಕ್ಕೆ ಜಿಲ್ಲಾಡಳಿತವೇ ಜವಾಬ್ದಾರಿಯಾಗಿ ನ್ಯಾಯ ಒದಗಿಸಬೇಕು,” ಎಂದು ಸ್ಥಳೀಯ ಗ್ರಾಮಸ್ಥ ಶಿವಪ್ಪ ಆಗ್ರಹಿಸಿದ್ದಾರೆ.