ಹಾವೇರಿ: ಜಿಲ್ಲೆಯ ಸವಣೂರು ತಾಲೂಕಿನ ಮೆಳಗಟ್ಟಿ ಗ್ರಾಮದಲ್ಲಿ ವಯೋವೃದ್ಧ ದಂಪತಿಯೊಂದಿಗೆ ಮಾನಸಿಕ ಅಸ್ವಸ್ಥ ಮಗನನ್ನು ಖಾಸಗಿ ಬ್ಯಾಂಕ್ ಸಿಬ್ಬಂದಿ ಯಾವುದೇ ಮುನ್ಸೂಚನೆಯಿಲ್ಲದೇ ಮನೆಯಿಂದ ಹೊರಗೆ ಹಾಕಿ, ಮನೆಗೆ ಬೀಗ ಹಾಕಿದ್ದಾರೆ. ಈ ಕಾರಣದಿಂದ ಕುಟುಂಬವು ಬೀದಿಗೆ ಬಿದ್ದಿದ್ದು, ಸ್ಥಳೀಯರಲ್ಲಿ ತೀವ್ರ ಆಕ್ರೋಶವನ್ನುಂಟು ಮಾಡಿದೆ.
ಸಹದೇವಪ್ಪ ಕೊಳೂರು (60) ಮತ್ತು ಅವರ ಪತ್ನಿ ಗಿರೀಜವ್ವ ಅವರು ತಮ್ಮ ಮಗಳ ಮದುವೆ ಮತ್ತು ಮನೆ ನಿರ್ಮಾಣಕ್ಕಾಗಿ ಎರಡೂವರೆ ವರ್ಷಗಳ ಹಿಂದೆ ಖಾಸಗಿ ಬ್ಯಾಂಕ್‌ನಿಂದ ಗೃಹಸಾಲ ಪಡೆದಿದ್ದರು. ಒಂದೂವರೆ ವರ್ಷಗಳ ಕಾಲ ಕೂಲಿ ಕೆಲಸ ಮಾಡಿ ಸಾಲದ ಕಂತುಗಳನ್ನು ಕಟ್ಟಿದ್ದರು. ಆದರೆ, ಸಹದೇವಪ್ಪ ಅವರು ಕಟ್ಟಡ ಕೆಲಸದ ವೇಳೆ ಮೇಲಿಂದ ಬಿದ್ದು ಕಾಲು ಮುರಿತಕ್ಕೊಳಗಾದರು, ಇದರಿಂದ ಅವರ ಆದಾಯದ ಮೂಲ ಕಡಿತಗೊಂಡಿತು.
ಸ್ಥಳೀಯರ ಆಕ್ರೋಶ
“ಬ್ಯಾಂಕ್ ಯಾವುದೇ ಔಪಚಾರಿಕ ನೋಟಿಸ್ ಇಲ್ಲದೇ ಕುಟುಂಬವನ್ನು ಹೊರಗೆ ಹಾಕಿರುವುದು ಮಾನವೀಯತೆಗೆ ವಿರುದ್ಧ. ಜಿಲ್ಲಾಡಳಿತವು ಈ ಕುಟುಂಬಕ್ಕೆ ತಕ್ಷಣ ಸೂಕ್ತ ಆಶ್ರಯ ಕಲ್ಪಿಸಬೇಕು. ಗ್ರಾಮಸ್ಥರು ಊಟ ನೀಡುತ್ತಿದ್ದಾರೆ, ಆದರೆ ಇದಕ್ಕೆ ಜಿಲ್ಲಾಡಳಿತವೇ ಜವಾಬ್ದಾರಿಯಾಗಿ ನ್ಯಾಯ ಒದಗಿಸಬೇಕು,” ಎಂದು ಸ್ಥಳೀಯ ಗ್ರಾಮಸ್ಥ ಶಿವಪ್ಪ ಆಗ್ರಹಿಸಿದ್ದಾರೆ.