ಸಂಪುಟ ಪುನಾರಚನೆ ಚರ್ಚೆಗೆ ಸಿಎಂ ಸಿದ್ದರಾಮಯ್ಯ-ಮಂತ್ರಿಗಳ ಡಿನ್ನರ್ ಸಭೆ

Untitled design (90)

ಬೆಂಗಳೂರು: ಕಾಂಗ್ರೆಸ್ ಪಕ್ಷದ ಒಳಗೆ ನವೆಂಬರ್ ತಿಂಗಳಲ್ಲಿ ಸಂಪುಟ ಪುನಾರಚನೆ ಮಾಡಲಾಗುವುದು ಎಂಬ ವದಂತಿಗಳ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅ.13 ರಂದು ಮಂತ್ರಿ ಮಂಡಲದ ಸಹೋದ್ಯೋಗಿಗಳೊಂದಿಗೆ ಡಿನ್ನರ್ ಸಭೆ ನಡೆಸಿದ್ದಾರೆ. ಕಾವೇರಿ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಸಂಪುಟ ಪುನಾರಚನೆ ಸೇರಿದಂತೆ ಹಲವಾರು ಪ್ರಮುಖ ವಿಷಯಗಳ ಮೇಲೆ ಚರ್ಚೆ ನಡೆದಿದೆ.

ಸಭೆಗೆ ಮುನ್ನ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸುಮಾರು 30 ನಿಮಿಷಗಳ ಕಾಲ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿದರು. ಈ ದ್ವಿಪಕ್ಷೀಯ ಭೇಟಿಯ ನಂತರವೇ ಇತರ ಮಂತ್ರಿಗಳನ್ನು ಒಳಗೊಂಡ ಮುಖ್ಯ ಸಭೆ ಆರಂಭವಾಗಿದೆ.

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇಬ್ಬರೂ ಸಭೆಯಲ್ಲಿ ಹಲವಾರು ಪ್ರಸ್ತುತ ರಾಜಕೀಯ ವಿಷಯಗಳನ್ನು ತಮ್ಮ ಸಹ ಮಂತ್ರಿಗಳೊಂದಿಗೆ ಪರಿಶೀಲಿಸಿದರು. ಮುಂಬರುವ ತಾಲೂಕು ಮತ್ತು ಗ್ರಾಮ ಪಂಚಾಯತ್ ಚುನಾವಣೆಗಳ ತಯಾರಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಾರ್ಯನಿರ್ವಹಣೆ, ಮತ್ತು ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಸೆರಿದಂತೆ ಸ್ವಯಂಸೇವಕ ಸಂಘಟನೆಗಳ ಕಾರ್ಯಕ್ರಮಗಳನ್ನು ನಿಷೇಧಿಸುವ ಸರ್ಕಾರದ ನೀತಿಗಳ ಸಭೆಯಲ್ಲಿ ಚರ್ಚಿಸಲಾಗಿದೆ.

ಅಲ್ಲದೆ, ಬಿಹಾರ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಕರ್ನಾಟಕ ಕಾಂಗ್ರೆಸ್ ಯಾವ ರೀತಿಯಲ್ಲಿ ಸಹಕಾರ ನೀಡಬಹುದು ಮತ್ತು ಪಕ್ಷದ ಪ್ರಚಾರ ಕಾರ್ಯಗಳನ್ನು ಹೇಗೆ ಮತ್ತಷ್ಟು ಬಲಪಡಿಸಬಹುದು ಎಂಬ ಬಗ್ಗೆಯೂ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರು ಮಂತ್ರಿಗಳಿಗೆ ಮಾರ್ಗದರ್ಶನ ನೀಡಿದರು.

ಡಿ.ಕೆ. ಶಿವಕುಮಾರ್ ಅವರು ಸಭಾ ಸ್ಥಳದಿಂದ ವಿರಮಿಸಿದ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಳಿದ ಮಂತ್ರಿಗಳೊಂದಿಗೆ ಸಂಪುಟ ಪುನಾರಚನೆಯ ಸೂಕ್ಷ್ಮ ವಿಷಯವನ್ನು ಚರ್ಚಿಸಿದರು. ತಾವು ಸಭೆಯಲ್ಲಿ ಹಲವಾರು ಮಂತ್ರಿಗಳು ಸಂಪುಟ ಪುನಾರಚನೆ ಕುರಿತು ಪ್ರಶ್ನಿಸಿದ್ದಾಗ, ಮುಖ್ಯಮಂತ್ರಿ ಅದರ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ಸ್ಪಷ್ಟಪಡಿಸಿದ್ದಾರೆ.

ಸಿದ್ದರಾಮಯ್ಯ ಅವರು, ಸಂಪುಟ ಪುನಾರಚನೆಯ ಬಗ್ಗೆ ನನಗೂ ಆಸಕ್ತಿ ಇದೆ. ಪಕ್ಷದ ಹೈಕಮಾಂಡ್ ಜೊತೆ ನಾನು ಈ ವಿಷಯದಲ್ಲಿ ಮಾತನಾಡುತ್ತಿದ್ದೇನೆ. ಸರ್ಕಾರದ ಅವಧಿಯ ಸಂಪುಟದಲ್ಲಿ ಬದಲಾವಣೆ ಆಗುವುದು ಸಹಜ. ಪ್ರಸ್ತುತ ಮಂತ್ರಿಗಳ ಕಾರ್ಯಕ್ಷಮತೆಯ ಮೌಲ್ಯಮಾಪನದ ವರದಿ ಪಕ್ಷದ ಹೈಕಮಾಂಡ್ ಬಳಿ ಇದೆ. ಯಾರನ್ನು ಸೇರಿಸಬೇಕು ಅಥವಾ ಹೊರಗಿಡಬೇಕು ಎಂಬುದರ ಕುರಿತು ಅಂತಿಮ ನಿರ್ಣಯ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವುದು. ನಾನು ವೈಯಕ್ತಿಕವಾಗಿ ಯಾರನ್ನು ‘ಇನ್’ ಅಥವಾ ‘ಔಟ್’ ಮಾಡಬೇಕು ಎಂದು ಹೇಳುವುದಿಲ್ಲ ಎಂದು ತಿಳಿಸಿದರು.

ಮುಖ್ಯ ಸಭೆಯ ಅನಂತರ, ಕೆಲವು ಮಂತ್ರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ವೈಯಕ್ತಿಕ ಮಾತುಕತೆ ನಡೆಸಿದರು. ಪ್ರತಿಯೊಬ್ಬ ಮಂತ್ರಿಯೊಂದಿಗೆ ಸುಮಾರು ಐದು ನಿಮಿಷಗಳ ಕಾಲ ‘ಒನ್-ಟು-ಒನ್’ ಮಾತುಕತೆ ನಡೆಸಿದರು. 

Exit mobile version