ಹಾಸನ: ಜಿಲ್ಲೆಯ ಅರಸೀಕೆರೆಯ ಸುಬ್ರಹ್ಮಣ್ಯ ನಗರ ಬಡಾವಣೆಯಲ್ಲಿ ಗುತ್ತಿಗೆದಾರ ವಿಜಯ್ ಕುಮಾರ್ (46) ಎಂಬವರನ್ನು ಚಿನ್ನಾಭರಣಗಳಿಗಾಗಿ ಕಾರ್ಮಿಕರೇ ಬರ್ಬರವಾಗಿ ಕೊಲೆಗೈದ ಘಟನೆ ನಡೆದಿದೆ. ಕೊಲೆಯ ನಂತರ ಆರೋಪಿಗಳು ವಿಜಯ್‌ರ ಕೈ ಬೆರಳಿನ ಚಿನ್ನದ ಉಂಗುರವನ್ನು ತೆಗೆಯಲಾಗದೇ, ಬೆರಳನ್ನೇ ಕತ್ತರಿಸಿ ಒಡವೆಯೊಂದಿಗೆ ಪರಾರಿಯಾಗಿದ್ದಾರೆ.
ವಿಜಯ್ ಕುಮಾರ್, ಶಿವಮೊಗ್ಗ-ಬೆಂಗಳೂರು ರಸ್ತೆಯಲ್ಲಿ ಶ್ರೀನಿವಾಸ್ ಎಂಬವರಿಗೆ ಸೇರಿದ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದರು. ಈ ಕಾಮಗಾರಿಗಾಗಿ ಬಿಹಾರ ಮೂಲದ ವಿಕ್ರಂ ಎಂಬ ಕಾರ್ಮಿಕನ ಕುಟುಂಬವನ್ನು ಎರಡು ತಿಂಗಳಿಂದ ತಮ್ಮ ಮನೆಯಲ್ಲಿ ಉಳಿಸಿಕೊಂಡಿದ್ದರು. ವಿಕ್ರಂನಿಗೆ ವಿಜಯ್‌ರ ಮೇಲಿದ್ದ ಚಿನ್ನಾಭರಣಗಳ ಮೇಲೆ ಕಣ್ಣಿತ್ತು. ಒಂದು ವಾರದ ಹಿಂದೆ ತನ್ನ ಪತ್ನಿ ಮತ್ತು ಮಕ್ಕಳನ್ನು ಊರಿನಲ್ಲಿ ಬಿಟ್ಟು, ಸಚಿನ್ ಎಂಬ ಮತ್ತೊಬ್ಬ ಸ್ನೇಹಿತನನ್ನು ಕರೆತಂದಿದ್ದ.
ವಿಕ್ರಂ, ವಿಜಯ್ ಕುಮಾರ್‌ಗೆ ರಾತ್ರಿ ಫೋನ್ ಮಾಡಿ, “ಸಚಿನ್ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದಾನೆ, ಬೇಗ ಬನ್ನಿ,” ಎಂದು ಸುಳ್ಳು ನೆಪವೊಡ್ಡಿ ಕರೆಯಿಸಿಕೊಂಡಿದ್ದ. ವಿಜಯ್, ಏನಾಗಿದೆ ಎಂದು ತಿಳಿಯಲು ಕಟ್ಟಡದ ಮಾಲೀಕ ಶ್ರೀನಿವಾಸ್‌ಗೆ ಮಾಹಿತಿ ನೀಡಿ, ಸ್ಥಳಕ್ಕೆ ತೆರಳಿದ್ದರು. ಆದರೆ, ಇದು ಆರೋಪಿಗಳ ಯೋಜನೆಯ ಭಾಗವಾಗಿತ್ತು. ವಿಜಯ್‌ರನ್ನು ಸ್ಥಳದಲ್ಲಿ ಕೊಂದು, ಆತನ ಮೇಲಿದ್ದ ಚಿನ್ನದ ಸರ, ಉಂಗುರ, ಹಣ, ಮತ್ತು ಮೊಬೈಲ್‌ನ್ನು ಕಿತ್ತುಕೊಂಡ ಆರೋಪಿಗಳು, ಒಂದು ಉಂಗುರವನ್ನು ತೆಗೆಯಲಾಗದೇ ಬೆರಳನ್ನೇ ಕತ್ತರಿಸಿ ಒಡವೆಯೊಂದಿಗೆ ಪರಾರಿಯಾಗಿದ್ದಾರೆ.
ಶ್ರೀನಿವಾಸ್‌ನಿಂದ ಪೊಲೀಸರಿಗೆ ಮಾಹಿತಿ
ವಿಜಯ್ ಕುಮಾರ್‌ರಿಂದ ಯಾವುದೇ ಸಂದೇಶ ಬಾರದಿದ್ದಾಗ ಆತಂಕಗೊಂಡ ಶ್ರೀನಿವಾಸ್, ಮನೆಯ ಬಳಿಯ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಿದಾಗ, ವಿಕ್ರಂ ಮತ್ತು ಸಚಿನ್ ವಿಜಯ್‌ರ ಬೈಕ್‌ನಲ್ಲಿ ಹೊರಟಿರುವುದು ಕಂಡುಬಂದಿತು. ಕೂಡಲೇ ಸ್ಥಳಕ್ಕೆ ತೆರಳಿದ ಶ್ರೀನಿವಾಸ್, ವಿಜಯ್ ಕುಮಾರ್‌ರನ್ನು ಕೊಲೆಗೈದಿರುವುದನ್ನು ಕಂಡು ಅರಸೀಕೆರೆ ನಗರ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಬಂಧನಕ್ಕೆ ತನಿಖೆ ಆರಂಭಿಸಿದ್ದಾರೆ.