ಧಾರವಾಡ: ಸಮಾಜದಲ್ಲಿ ಯಾರು ಒಳ್ಳೆಯ ವ್ಯಕ್ತಿತ್ವ ಹಾಗೂ ನಡತೆ ಹೊಂದಿರುತ್ತಾರೋ ಅವರನ್ನು ಇಡೀ ಜಗತ್ತೇ ತಿರುಗಿ ನೋಡುವ ಮೂಲಕ ಅಂತವರಿಗೆ ಗೌರವ ಕೊಡುತ್ತದೆ ಎಂದು ಸ್ವರ್ಣಾ ಗ್ರೂಪ್ ಆಫ್ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಸಿ.ಎಸ್.ವಿಎಸ್‌ವಿ ಪ್ರಸಾದ್ ಹೇಳಿದರು.
ಧಾರವಾಡದ ಕೆಎಂಎಫ್ ಹತ್ತಿರ ಇರುವ ಡಾ.ಡಿ.ಬಿ.ಶೆಟ್ಟಿ ಎಜ್ಯುಕೇಶನಲ್ ಸೊಸೈಟಿ ಹಮ್ಮಿಕೊಂಡಿದ್ದ ರಜತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಅವರು, ಜೀವನದಲ್ಲಿ ಯಾರು ಎಷ್ಟು ಹಣ ಗಳಿಸಿದ್ದಾರೆ ಎಂಬುದನ್ನು ನೋಡಿ ಯಾರೂ ಗೌರವ ಕೊಡುವುದಿಲ್ಲ. ಆದರೆ, ಒಳ್ಳೆಯ ನಡತೆ ಹಾಗೂ ವ್ಯಕ್ತಿತ್ವ ಹೊಂದಿದವರಿಗೆ ಮಾತ್ರ ಈ ಸಮಾಜದಲ್ಲಿ ಗೌರವ ಸಿಗುತ್ತದೆ. ಅಂತವರನ್ನು ಇಡೀ ಜಗತ್ತೇ ತಿರುಗಿ ನೋಡುತ್ತದೆ. ಒಂದು ಸಂಸ್ಥೆಯನ್ನು ಕಟ್ಟುವುದು ಸುಲಭ. ಆದರೆ, ಅದನ್ನು ಸುದೀರ್ಘವಾಗಿ ಮುನ್ನಡೆಸಿಕೊಂಡು ಬರುವುದು ಕಷ್ಟದ ಕೆಲಸ. ಡಾ.ಡಿ.ಜಿ.ಶೆಟ್ಟಿ ಅವರು ಒಂದು ಶಿಕ್ಷಣ ಸಂಸ್ಥೆ ಕಟ್ಟಿ ಅದನ್ನು ಮುನ್ನಡೆಸಿಕೊಂಡು ಬರುವ ಮೂಲಕ ಸುಮಾರು 15-20 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಯುವ ಸಮೂಹ ನಮ್ಮ ದೇಶದ ಆಸ್ತಿ ಎಂದು ಹೇಳಿ, ಉತ್ತಮ ಶಿಕ್ಷಣದೊಂದಿಗೆ ಅದರಲ್ಲೂ ಸದ್ಯ ಆವಿಷ್ಕಾರಗೊಳ್ಳುತ್ತಿರುವ ಎಐನಂತಹ ತಂತ್ರಜ್ಞಾನದೊಂದಿಗೆ ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಕಲಿತ ಶಿಕ್ಷಣ ಸಂಸ್ಥೆ ಹಾಗೂ ದೇಶಕ್ಕೆ ಒಳ್ಳೆಯ ಹೆಸರು ತರಬೇಕು ಎಂದರು.
ವಿಎಸ್‌ವಿ ಪ್ರಸಾದ್ ಅವರನ್ನು ಡಾ.ಡಿ.ಬಿ.ಶೆಟ್ಟಿ ಎಜ್ಯುಕೇಶನಲ್ ಸೊಸೈಟಿ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ರಜತ ಮಹೋತ್ಸವದ ಅಂಗವಾಗಿ ಸ್ಥಾಪಿಸಲಾದ ನೂತನ ಕಟ್ಟಡ ಹಾಗೂ ಸವಿನೆನಪಿನ ಫಲಕಗಳನ್ನು ಅನಾವರಣಗೊಳಿಸಲಾಯಿತು. ಅಲ್ಲದೇ ಸ್ಮರಣ ಸಂಚಿಕೆಯನ್ನೂ ಬಿಡುಗಡೆಗೊಳಿಸಲಾಯಿತು.
ಇದೇ ಸಂದರ್ಭದಲ್ಲಿ ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್‌ನ ಅಧ್ಯಕ್ಷ ಎಸ್.ಬಿ.ಶೆಟ್ಟಿ ಅವರಿಗೆ ವಿದ್ಯಾ ಪೋಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬಾಂಬೆ ಬಂಟ್ಸ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಉಪ್ಪೂರು ಶೇಖರ್ ಶೆಟ್ಟಿ, ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಡಾ.ಅಜಿತ್ ಪ್ರಸಾದ್, ಜೆ.ಎಸ್.ಫ್ರೀ ಯುನಿವರ್ಸಿಟಿ ನಿರ್ದೇಶಕ ಡಾ.ಜಯರಾಮ್ ಶೆಟ್ಟಿ ಇದ್ದರು. ಡಾ.ಡಿ.ಬಿ.ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.





