ಧಾರವಾಡ, ಸೆ. 01: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡ ಹೊರವಲಯದ ವೆಂಕಟಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.
ಮೃತರನ್ನು ದಾವಣಗೆರೆ ಜಿಲ್ಲೆಯ ಕೆರೆಯಾಗಳ ಗ್ರಾಮದ ವಿನಾಯಕ ಕೆ.ಯು. (25), ಮಂಜುನಾಥ್ (29) ಹಾಗೂ ಬಸವರಾಜ (34) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೇಟರಿಂಗ್ ಕೆಲಸಕ್ಕೆ ಬಂದಿದ್ದ ಯುವಕರು
ಮೃತ ಯುವಕರು ಕೇಟರಿಂಗ್ ಕೆಲಸಕ್ಕಾಗಿ ಧಾರವಾಡಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ಸೋಮವಾರ ಮಧ್ಯರಾತ್ರಿ ಸುಮಾರು 2.30ರ ವೇಳೆಗೆ ಕೆಲಸ ಮುಗಿಸಿಕೊಂಡ ಬಳಿಕ ಧಾರವಾಡ ಹೊರವಲಯದ ಡಾಬಾಕ್ಕೆ ಊಟಕ್ಕೆ ತೆರಳಿದ್ದರು.
ಊಟ ಮುಗಿಸಿ ಕಾರಿನಲ್ಲಿ ನಗರಕ್ಕೆ ವಾಪಸ್ ಬರುತ್ತಿದ್ದ ವೇಳೆ ಎದುರಿನಿಂದ ಏಕಾಏಕಿ ಲಾರಿಯೊಂದು ಬಂದಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಲಾರಿಯನ್ನು ತಪ್ಪಿಸಲು ಚಾಲಕ ಬಸನಗೌಡ ಒಮ್ಮೆಲೆ ಬ್ರೇಕ್ ಹಾಕಿದ್ದಾರೆ ಎನ್ನಲಾಗಿದೆ.
ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ವೇಗವಾಗಿ ರಸ್ತೆ ಮಧ್ಯದ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಪಲ್ಟಿಯಾಗಿ ಸಂಪೂರ್ಣ ಜಖಂಗೊಂಡಿದೆ.
ಸ್ಥಳದಲ್ಲೇ ಮೂವರ ದುರ್ಮರಣ
ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ವಿನಾಯಕ, ಮಂಜುನಾಥ್ ಹಾಗೂ ಬಸವರಾಜ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕ ಬಸನಗೌಡ ಸೇರಿದಂತೆ ಅಭಿಷೇಕ್ ಹಾಗೂ ಅಜಯ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ಗಾಯಾಳುಗಳನ್ನು ಕಾರಿನಿಂದ ಹೊರತೆಗೆದು ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಾಳುಗಳಿಗೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಸಾವಿನ ಸುದ್ದಿ ಕೇಳಿ ಚಾಲಕ ಕಣ್ಣೀರು
ಅಪಘಾತದ ಬಳಿಕ ಆಸ್ಪತ್ರೆಗೆ ದಾಖಲಾದ ಕಾರು ಚಾಲಕ ಬಸನಗೌಡ, ತಮ್ಮ ಸಹೋದ್ಯೋಗಿಗಳು ಮೃತಪಟ್ಟಿರುವ ವಿಚಾರ ತಿಳಿದು ಕಣ್ಣೀರಿಟ್ಟಿದ್ದಾರೆ.
“ಆ್ಯಂಬುಲೆನ್ಸ್‌ನಲ್ಲಿ ನಮ್ಮನ್ನು ಆಸ್ಪತ್ರೆಗೆ ಕರೆತರಲಾಯಿತು. ಇಲ್ಲಿಗೆ ಬಂದ ಬಳಿಕವೇ ನನ್ನ ಸಹೋದ್ಯೋಗಿಗಳು ಮೃತಪಟ್ಟಿರುವ ವಿಷಯ ಗೊತ್ತಾಯಿತು” ಎಂದು ಅವರು ನೋವು ವ್ಯಕ್ತಪಡಿಸಿದ್ದಾರೆ.
ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
ಈ ಘಟನೆ ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ. ಎದುರಿನಿಂದ ಬಂದ ಲಾರಿಯನ್ನು ತಪ್ಪಿಸುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದೆಯೇ ಅಥವಾ ಮತ್ತಾವುದೇ ಕಾರಣವಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ದಾವಣಗೆರೆ ಮೂಲದ ಮೂವರು ಯುವಕರು ಒಂದೇ ಅಪಘಾತದಲ್ಲಿ ಮೃತಪಟ್ಟಿರುವುದು ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ಆಘಾತಕ್ಕೆ ಕಾರಣವಾಗಿದೆ.





