ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯೂಟ್ಯೂಬರ್ ಎಂ.ಡಿ. ಸಮೀರ್ ಸುಮೋಟೋ ಕೇಸ್‌ಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿದ್ದು, ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ಎಐ ತಂತ್ರಜ್ಞಾನ ಬಳಸಿ ರಚಿಸಿದ ವೀಡಿಯೋಗಳ ಮೂಲಕ ಗಲಭೆಗೆ ಪ್ರಚೋದನೆ ನೀಡಿದ ಹಾಗೂ ತಪ್ಪು ಮಾಹಿತಿ ಹರಡಿದ ಆರೋಪದ ಮೇಲೆ ಬೆಳ್ತಂಗಡಿ ಪೊಲೀಸರು ಸಮೀರ್ ವಿರುದ್ಧ ಸುಮೋಟೋ ಕೇಸ್ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗಿದ್ದು, ಅಧಿಕಾರಿಗಳ ಪ್ರಶ್ನೆಗಳಿಗೆ ಕಕ್ಕಾಬಿಕ್ಕಿಯಾಗಿದ್ದಾನೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸಮೀರ್‌ನ ವಿಚಾರಣೆ ಸುಮಾರು ಒಂದೂವರೆ ಗಂಟೆಗಳಿಂದ ನಡೆಯುತ್ತಿದ್ದು, ತನಿಖಾಧಿಕಾರಿಗಳು ಸಮೀರ್‌ನನ್ನು ತೀವ್ರವಾಗಿ ಪ್ರಶ್ನಿಸುತ್ತಿದ್ದಾರೆ. ಪೊಲೀಸರು ವೀಡಿಯೊವನ್ನು ಪ್ಲೇ ಮಾಡಿ, ಸಮೀರ್‌ನಿಂದ ಸಾಕ್ಷ್ಯ ಕೇಳುತ್ತಿದ್ದಾರೆ. ಪ್ರತಿ ಸನ್ನಿವೇಶಕ್ಕೂ ದಾಖಲೆ ಕೇಳಲಾಗುತ್ತಿದ್ದು, ಸಮೀರ್ ದಾಖಲೆ ನೀಡಲು ಮತ್ತು ಸಾಕ್ಷ್ಯ ಹೇಳಲು ತಡಕಾಡುತ್ತಿದ್ದಾನೆ. ಯಾರೋ ಹೇಳಿದ ಕಥೆಯನ್ನು ಕೇಳಿ ವೀಡಿಯೊ ಮಾಡಿರುವುದಾಗಿ ಸಮೀರ್ ಒಪ್ಪಿಕೊಂಡಿದ್ದಾನೆ. “ನನಗೆ ಏನೂ ತಿಳಿದಿಲ್ಲ, ಬೇರೆಯವರು ಹೇಳಿದ್ದನ್ನು ಕೇಳಿ ವೀಡಿಯೊ ತಯಾರಿಸಿದ್ದೇನೆ” ಎಂದು ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾನೆ.
ವಿಚಾರಣೆಯ ಆರಂಭದಲ್ಲಿ, ‘ದೂತ’ ಯೂಟ್ಯೂಬ್ ಚಾನೆಲ್ ಮತ್ತು ವೀಡಿಯೊದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದೆ. ವೀಡಿಯೊ ತಯಾರಿಕೆ, ಅಪ್‌ಲೋಡ್ ಮತ್ತು ‘ದೂತ’ ಚಾನೆಲ್‌ನೊಂದಿಗಿನ ಸಂಬಂಧ ಏನು? ವೀಡಿಯೊವನ್ನು ಯಾರು ಚಿತ್ರೀಕರಿಸಿದರು ಮತ್ತು ಎಡಿಟ್ ಮಾಡಿದರು? ಎಐ ವೀಡಿಯೊ ತಯಾರಿಸಿದ ಉದ್ದೇಶ ಏನು? ಸಾರ್ವಜನಿಕರಲ್ಲಿ ಗೊಂದಲ ಅಥವಾ ದ್ವೇಷ ಹುಟ್ಟಿಸುವ ಉದ್ದೇಶವಿತ್ತೇ? ವೀಡಿಯೊದಲ್ಲಿ ಹೇಳಿದ ವಿಷಯಗಳ ಸತ್ಯಾಸತ್ಯತೆಯನ್ನು ಹೇಗೆ ದೃಢಪಡಿಸಿದಿರಿ? ಇದಕ್ಕೆ ದಾಖಲೆ ಇದೆಯೇ? ಎಂದು ಅಧಿಕಾರಿಗಳು ಪ್ರಶ್ನಿಸಿದ್ದಾರೆ.
ವೀಡಿಯೊ ಅಪ್‌ಲೋಡ್ ಮಾಡಲು ಬಳಸಿದ ಉಪಕರಣ (ಮೊಬೈಲ್/ಕಂಪ್ಯೂಟರ್) ಎಲ್ಲಿದೆ? ಯೂಟ್ಯೂಬ್ ಚಾನೆಲ್‌ನ ಲಾಗಿನ್ ವಿವರಗಳು ಯಾರ ಬಳಿಯಿವೆ? ‘ದೂತ’ ಚಾನೆಲ್‌ನಲ್ಲಿ ಇನ್ನು ಯಾರೆಲ್ಲಾ ಭಾಗಿಯಾಗಿದ್ದಾರೆ? ಈ ವಿಷಯವನ್ನು ಯಾರು ನಿಮಗೆ ಹೇಳಿಕೊಟ್ಟರು ಅಥವಾ ವೀಡಿಯೊ ಮಾಡಲು ಪ್ರೇರೇಪಿಸಿದರು? 2018ರ ಸಾಕ್ಷ್ಯ ಸಂರಕ್ಷಣಾ ಕಾಯಿದೆ ಬಗ್ಗೆ ಏನಾದರೂ ತಿಳಿದಿದೆಯೇ? ವೀಡಿಯೊವನ್ನು ಯೂಟ್ಯೂಬ್‌ಗೆ ಯಾರು ಅಪ್‌ಲೋಡ್ ಮಾಡಿದರು? ವೀಡಿಯೊ ತಯಾರಿಕೆಗೆ ಎಐ ಟೂಲ್‌ಗಳನ್ನು ಬಳಸಿದ್ದೀರಾ? ಬಳಸಿದ್ದರೆ, ಯಾವ ಟೂಲ್‌ಗಳು? ಎಐ ಮೂಲಕ ನಕಲಿ ಚಿತ್ರ/ವೀಡಿಯೊ ಸೇರಿಸಿದ ಉದ್ದೇಶ ಏನು? ವೀಡಿಯೊದ ನಿಖರ ಉದ್ದೇಶವೇನು? ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿದ್ದೀರಾ? ‘ದೂತ’ ಚಾನೆಲ್‌ನೊಂದಿಗಿನ ಸಂಪರ್ಕ ಹೇಗೆ ಆರಂಭವಾಯಿತು? ವೀಡಿಯೊ ತಯಾರಿಕೆಯಲ್ಲಿ ಇನ್ನಾರು ಭಾಗವಹಿಸಿದ್ದಾರೆ? ವೀಡಿಯೊ ತಯಾರಿಕೆಗೆ ಅಥವಾ ಹಂಚಿಕೆಗೆ ಯಾವುದೇ ಹಣ ಅಥವಾ ಬೆಂಬಲ ಸಿಕ್ಕಿತೇ? ಯೂಟ್ಯೂಬ್ ವೀಡಿಯೊದಿಂದ ಆದಾಯ ಬಂದಿದೆಯೇ, ಎಷ್ಟು? ವೀಡಿಯೊ ಲಿಂಕ್‌ನ್ನು ಮೊದಲು ಯಾರಿಗೆ ಹಂಚಿದ್ದೀರಿ? ಎಂದು ಪೊಲೀಸರು ಪ್ರಶ್ನಿಸಿದ್ದಾರೆ.
ಫೇಸ್‌ಬುಕ್, ಟ್ವಿಟರ್ (X), ವಾಟ್ಸಾಪ್ ಗುಂಪುಗಳಲ್ಲಿ ವೀಡಿಯೊ ಹಂಚಲು ಸೂಚನೆ ನೀಡಿದ್ದೀರಾ? ವೀಡಿಯೊ ವೈರಲ್ ಮಾಡಲು ಪೇಯ್ಡ್ ಪ್ರೊಮೋಶನ್ ಮಾಡಿದ್ದೀರಾ? ವೀಡಿಯೊದ ವಿಷಯಗಳ ಮೂಲ ಎಲ್ಲಿಂದ ಸಿಕ್ಕಿತು? ಅವು ನಿಜವಾದ ದಾಖಲೆಗಳೇ ಅಥವಾ ಕೃತಕವಾಗಿ ಸೃಷ್ಟಿಸಿದವು? ಆರೋಪಗಳ ಸತ್ಯಾಸತ್ಯತೆಯನ್ನು ದೃಢಪಡಿಸಿದ್ದೀರಾ? ವೀಡಿಯೊ ಎಡಿಟ್ ಮಾಡಲು ಯಾವ ಸಾಫ್ಟ್‌ವೇರ್ ಬಳಸಿದಿರಿ? ವೀಡಿಯೊ ತಯಾರಿಕೆಯಲ್ಲಿ ಎಷ್ಟು ಮಂದಿ ನೇರ/ಪರೋಕ್ಷವಾಗಿ ಭಾಗವಹಿಸಿದ್ದಾರೆ? ವೀಡಿಯೊ ಬಿಡುಗಡೆಯಾದ ನಂತರ ಜನರಿಂದ ಬಂದ ಪ್ರತಿಕ್ರಿಯೆ ಏನು? ಯಾರಾದರೂ ಬೆಂಬಲಕ್ಕೆ/ಅಭಿನಂದನೆಗೆ ಸಂಪರ್ಕಿಸಿದರಾ? ಪೊಲೀಸರ ಅಥವಾ ಸ್ಥಳೀಯರ ಪ್ರತಿಕ್ರಿಯೆ ತಿಳಿದ ನಂತರ ವೀಡಿಯೊ ಅಳಿಸಲು ಯೋಚಿಸಿದ್ದೀರಾ? ಎಂದು ಪೊಲೀಸರು ಸಾಲುಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ.