ಮಂಗಳೂರು, ಜುಲೈ 18: ಕಳೆದ ಎರಡು ವಾರಗಳಿಂದ ರಾಜ್ಯದ ಹಲವೆಡೆ ಮಳೆ ಕೈಕೊಟ್ಟಿದ್ದರಿಂದ ಬರಗಾಲದ ಆತಂಕ ಎದುರಾಗಿತ್ತು. ಆದರೆ ಇದೀಗ ಮಳೆರಾಯ ಮತ್ತೆ ರಾಜ್ಯದಲ್ಲಿ ಚುರುಕುಗೊಂಡಿದ್ದು, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಶನಿವಾರ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ತಿಂಗಳ ಮೊದಲ ವಾರದಲ್ಲಿ ರಾಜ್ಯಾದ್ಯಂತ ಉತ್ತಮ ಮಳೆಯಾಗಿದ್ದರೂ, ಬಳಿಕ ಸುಮಾರು 15 ದಿನಗಳ ಕಾಲ ಮಳೆಯ ಪ್ರಮಾಣ ಗಣನೀಯವಾಗಿ ಕುಸಿದಿತ್ತು. ಹಲವು ಜಿಲ್ಲೆಗಳಲ್ಲಿ ತೀವ್ರ ಬಿಸಿಲಿನ ವಾತಾವರಣ ನಿರ್ಮಾಣವಾಗಿದ್ದರಿಂದ ರೈತರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಇದೀಗ ಮಳೆರಾಯನ ಆರ್ಭಟ ಮತ್ತೆ ಆರಂಭವಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ಮಳೆ ವಿರಾಮ ಪಡೆದಿದ್ದರೂ, ಇದೀಗ ಮತ್ತೆ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ದ.ಕ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಹೊರಡಿಸಿರುವ ಆದೇಶದಂತೆ, ಅಂಗನವಾಡಿಯಿಂದ ದ್ವಿತೀಯ ಪಿಯುಸಿ ವರೆಗಿನ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ.
ಹವಾಮಾನ ಇಲಾಖೆ ರಾಜ್ಯದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಈ ಜಿಲ್ಲೆಗಳಲ್ಲಿ ಭಾರೀ ಮಳೆಯೊಂದಿಗೆ ಬಿರುಗಾಳಿ ಹಾಗೂ ಗುಡುಗು-ಮಿಂಚಿನ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.
ಇದಲ್ಲದೆ, ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಿಗೆ, ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜಿಲ್ಲಾಡಳಿತ ಸಾರ್ವಜನಿಕರಿಗೆ ಅನಗತ್ಯವಾಗಿ ನದಿ, ತಗ್ಗು ಪ್ರದೇಶ, ಗುಡ್ಡ ಪ್ರದೇಶಗಳಿಗೆ ತೆರಳದಂತೆ ಹಾಗೂ ಹವಾಮಾನ ಇಲಾಖೆಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದೆ. ಮೀನುಗಾರರು ಸಮುದ್ರಕ್ಕೆ ಇಳಿಯುವ ಮೊದಲು ಹವಾಮಾನ ಮಾಹಿತಿ ಪರಿಶೀಲಿಸಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಮಳೆ ಮತ್ತೆ ಚುರುಕುಗೊಂಡಿರುವುದು ರೈತರಿಗೆ ನೆಮ್ಮದಿ ತಂದಿದ್ದರೂ, ಭಾರೀ ಮಳೆಯ ಸಾಧ್ಯತೆಯಿಂದ ಕರಾವಳಿ ಹಾಗೂ ಮಲೆನಾಡು ಭಾಗದ ಜನರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.





