ತುಮಕೂರು ಜುಲೈ 18: ಪಕ್ಕದ ರಾಜ್ಯ ಆಂಧ್ರ ಪ್ರದೇಶದಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಗಡಿಭಾಗಗಳಲ್ಲಿ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಸೇರಿದಂತೆ ಆಂಧ್ರ ಗಡಿಭಾಗದಲ್ಲಿ ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದ್ದು, ಪ್ರಯಾಣಿಕರ ಆರೋಗ್ಯ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ.
ಆಂಧ್ರ ಪ್ರದೇಶದಲ್ಲಿ ಕೋವಿಡ್ ಸೋಂಕು ಮತ್ತೆ ಹರಡುವ ಲಕ್ಷಣಗಳು ಕಂಡುಬಂದಿದ್ದು, ಅಲ್ಲಿನ ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ ಶುಕ್ರವಾರ ನಾಲ್ವರು ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಬೆಳವಣಿಗೆಯ ಹಿನ್ನೆಲೆ ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಆತಂಕ ಹೆಚ್ಚಿದ್ದು, ಸೋಂಕು ರಾಜ್ಯಕ್ಕೆ ಹರಡದಂತೆ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಬಿಗಿಗೊಳಿಸಿದೆ.
ಪಾವಗಡ ಹಾಗೂ ಆಂಧ್ರ ಪ್ರದೇಶವನ್ನು ಸಂಪರ್ಕಿಸುವ ಎಂಟು ಗಡಿ ಮಾರ್ಗಗಳಲ್ಲಿ ವಿಶೇಷ ತಪಾಸಣೆ ಆರಂಭಿಸಲಾಗಿದೆ. ನಾಗಲಮಡಿಕೆ, ಕೊಡಮಡುಗು, ವಳ್ಳೂರಿ ಸೇರಿದಂತೆ ಪ್ರಮುಖ ಚೆಕ್‌ಪೋಸ್ಟ್‌ಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮೂಲಕ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಜೊತೆಗೆ ಅವರ ಪ್ರಯಾಣದ ವಿವರಗಳನ್ನು ದಾಖಲಿಸಿ ಅಗತ್ಯವಿದ್ದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ.
ಆಂಧ್ರದಿಂದ ಕರ್ನಾಟಕ ಪ್ರವೇಶಿಸುವ ಪ್ರಮುಖ ರಸ್ತೆ ಮಾರ್ಗಗಳಲ್ಲಿ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ. ಯಾವುದೇ ಶಂಕಿತ ಲಕ್ಷಣ ಕಂಡುಬಂದರೆ ತಕ್ಷಣವೇ ಪ್ರತ್ಯೇಕಿಸಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಅಧಿಕಾರಿಗಳು ಮುಂದಿನ 11 ದಿನಗಳ ಕಾಲ ಈ ತಪಾಸಣೆ ಮತ್ತು ಮೇಲ್ವಿಚಾರಣೆಯನ್ನು ನಿರಂತರವಾಗಿ ಮುಂದುವರಿಸಲಿದ್ದಾರೆ.
ಇದುವರೆಗೆ ಗಡಿಭಾಗದಲ್ಲಿ ನಡೆದ ತಪಾಸಣೆಯಲ್ಲಿ ಯಾವುದೇ ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಮುಂಜಾಗ್ರತಾ ಕ್ರಮವಾಗಿ ಪಾವಗಡ ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು, ಅಗತ್ಯ ಪ್ರಮಾಣದ ಹಾಸಿಗೆಗಳು, ಆಮ್ಲಜನಕ (ಆಕ್ಸಿಜನ್) ವ್ಯವಸ್ಥೆ ಹಾಗೂ ತುರ್ತು ಚಿಕಿತ್ಸೆಗೆ ಬೇಕಾದ ಸೌಲಭ್ಯಗಳನ್ನು ಸಿದ್ಧವಾಗಿಡಲಾಗಿದೆ.
ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಪ್ರತಿಕ್ರಿಯೆ ಏನು?
ಈ ಕುರಿತು ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ನೆರೆಯ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಕೋವಿಡ್‌ನಿಂದ ಸಾವಿನ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಗಡಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ. ಸೋಂಕಿನ ಶಂಕೆ ಇರುವವರನ್ನು ತಕ್ಷಣವೇ ಪ್ರತ್ಯೇಕಿಸಿ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಅಲ್ಲದೆ, ತುಮಕೂರು ಜಿಲ್ಲೆಯಲ್ಲಿ ಡೆಂಗ್ಯೂ ಹಾಗೂ ಚಿಕನ್‌ಗುನ್ಯಾ ಪ್ರಕರಣಗಳೂ ವರದಿಯಾಗಿರುವುದರಿಂದ ಸಾರ್ವಜನಿಕ ಆರೋಗ್ಯದ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಲಾಗಿದೆ. ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವಂತೆ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಕಲುಷಿತ ನೀರಿನಿಂದ ಬ್ಯಾಕ್ಟೀರಿಯಾ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಈ ಕ್ರಮ ಅಗತ್ಯ ಎಂದು ಡಿಸಿಎಂ ತಿಳಿಸಿದ್ದಾರೆ.
ಸಾರ್ವಜನಿಕರು ಅನಗತ್ಯ ಆತಂಕಕ್ಕೆ ಒಳಗಾಗದೆ, ಜ್ವರ, ಕೆಮ್ಮು, ಉಸಿರಾಟದ ತೊಂದರೆ ಸೇರಿದಂತೆ ಕೋವಿಡ್ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.





