ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು 18 ವರ್ಷಗಳ ಬಳಿಕ ಐಪಿಎಲ್ 2025 ಟ್ರೋಫಿಯನ್ನು ಗೆದ್ದ ಸಂಭ್ರಮವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದ ದುರಂತದಿಂದ ಸೂತಕದಲ್ಲಿ ಮರೆಯಾಗಿದೆ. ಈ ಘಟನೆಯಲ್ಲಿ ಒಟ್ಟು 11 ಜನರು ಮೃತಪಟ್ಟಿದ್ದು, ಇವರಲ್ಲಿ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ರಾಯಸಮುದ್ರ ಗ್ರಾಮದ ಪೂರ್ಣಚಂದ್ರ (25) ಕೂಡ ಒಬ್ಬರಾಗಿದ್ದಾರೆ. ಈ ದುರಂತದಿಂದ ಪೂರ್ಣಚಂದ್ರನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಪೂರ್ಣಚಂದ್ರ (25) ಮೈಸೂರಿನ ಖಾಸಗಿ ಕಂಪನಿಯೊಂದರಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆರ್‌ಸಿಬಿ ತಂಡದ ಐಪಿಎಲ್ ವಿಜಯೋತ್ಸವದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಮೈಸೂರಿನಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಿದ್ದರು. ಆದರೆ, ಈ ಕಾರ್ಯಕ್ರಮದಲ್ಲಿ ಸಂಭವಿಸಿದ ಕಾಲ್ತುಳಿತದಿಂದಾಗಿ ಅವರು ದುರದೃಷ್ಟವಶಾತ್ ಸಾವನ್ನಪ್ಪಿದರು.
ಪೂರ್ಣಚಂದ್ರನ ಸಾವಿನ ಸುದ್ದಿ ತಿಳಿದು ಕುಟುಂಬದವರ ಆಕ್ರಂದನ ಹೃದಯವಿದ್ರಾವಕವಾಗಿದೆ. “ಬೆಳಗ್ಗೆಯಷ್ಟೇ ಮಗನಿಗೆ ಮದುವೆಗಾಗಿ ಹುಡುಗಿಯನ್ನು ನೋಡಿದ್ದೆವು. ಸಂಜೆ ಟಿವಿಯಲ್ಲಿ ಅವನ ಸಾವಿನ ಸುದ್ದಿಯನ್ನು ಕೇಳಿದೆವು. ಅವನು ಬೆಂಗಳೂರಿಗೆ ಹೋಗಿರುವುದೇ ಗೊತ್ತಿರಲಿಲ್ಲ. ‘ಸಾಯಂಕಾಲ ಫೋನ್ ಮಾಡ್ತೀನಿ ಅಮ್ಮ’ ಎಂದಿದ್ದ. ಟಿವಿ ನೋಡಿದಾಗಲೇ ಅವನು ಇನ್ನಿಲ್ಲ ಎಂದು ಗೊತ್ತಾಯಿತು. ಈಗ ನಮಗೆ ಯಾರು ದಿಕ್ಕು?” ಎಂದು ಪೂರ್ಣಚಂದ್ರನ ತಾಯಿ ಕಣ್ಣೀರು ಹಾಕಿದ್ದಾರೆ.
ಪೂರ್ಣಚಂದ್ರನ ತಾಯಿ, “ಅವನಿಗೆ ಮದುವೆ ಮಾಡಬೇಕೆಂದು ಹುಡುಗಿ ಹುಡುಕಿದ್ದೆವು. ‘ಹುಡುಗಿ ಕಪ್ಪುಗೆ ಇದಾಳೆ’ ಎಂದಿದ್ದ, ‘ಆ ಮೇಲೆ ಹೇಳ್ತೀನಿ ಅಮ್ಮ’ ಅಂದಿದ್ದ. ನನ್ನ ಮಗ ದೇವರಂತ ಮನುಷ್ಯನಾಗಿದ್ದ. ಡ್ಯೂಟಿಗೆ ಹೋಗ್ತೀನಿ ಎಂದು ಹೇಳಿರಲಿಲ್ಲ,” ಎಂದು ಭಾವುಕರಾಗಿ ಹೇಳಿದ್ದಾರೆ. “ಕ್ರಿಕೆಟ್ ಹುಚ್ಚಿನಿಂದ ಜೂನ್ 3ರ ರಾತ್ರಿಯೂ ಕ್ರಿಕೆಟ್ ನೋಡಿದ್ದ. 18 ವರ್ಷಗಳ ಬಳಿಕ ಆರ್‌ಸಿಬಿ ಗೆದ್ದಿದ್ದಕ್ಕೆ ಮನೆಯಲ್ಲಿ ಮೊಮ್ಮಗನಿಗಾಗಿ ಜಾಮೂನು ಮಾಡಿದ್ದೆ. ಗಂಡನೂ ಸಿಹಿ ಮಾಡು ಎಂದಿದ್ದ. ‘ಕಾಲ್ ಕೆ.ಜಿ ಮೈಸೂರುಪಾಕ್ ತರುತ್ತೇನೆ, ಎಲ್ಲರೂ ತಿನ್ನೋಣ’ ಎಂದಿದ್ದ. ಅವನು ಬೆಂಗಳೂರಿಗೆ ಹೋಗಿದ್ದು ಗೊತ್ತಿರಲಿಲ್ಲ, ಡ್ಯೂಟಿಗೆ ಹೋಗಿದ್ದಾನೆ ಎಂದುಕೊಂಡಿದ್ದೆವು,” ಎಂದು ತಾಯಿ ಕ್ಯಾಮೆರಾ ಮುಂದೆ ಕಣ್ಣೀರು ಹಾಕಿದ್ದಾರೆ.
ಆರ್‌ಸಿಬಿ ತಂಡವು 18 ವರ್ಷಗಳ ಕಾಯುವಿಕೆಯ ನಂತರ ಐಪಿಎಲ್ 2025 ಟ್ರೋಫಿಯನ್ನು ಗೆದ್ದಿತ್ತು. ಈ ಸಂಭ್ರಮವನ್ನು ಆಚರಿಸಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ವಿಜಯೋತ್ಸವ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಘೋಷಿಸಲಾಗಿತ್ತು. ಇದರಿಂದ ಲಕ್ಷಾಂತರ ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗಿದ್ದರು, ಇದು ಕಾಲ್ತುಳಿತಕ್ಕೆ ಕಾರಣವಾಯಿತು. ಈ ಘಟನೆಯಲ್ಲಿ 11 ಜನರು ಸಾವನ್ನಪ್ಪಿದ್ದು, 33ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕರ್ನಾಟಕ ಸರ್ಕಾರವು ಮೃತರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ಮತ್ತು ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಘೋಷಿಸಿದೆ.