ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ವಿದ್ಯಾನಿಧಿ ಖಾಸಗಿ ಶಾಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. 8ನೇ ತರಗತಿಯ ವಿದ್ಯಾರ್ಥಿ ಸುಶಾಂತ್ ಮೇಲೆ ಶಾಲೆಯ ಶಿಕ್ಷಕರೇ ಹಲ್ಲೆ ನಡೆಸಿದ್ದಾರೆ ಎಂದುಆರೋಪ ಬಂದಿದೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿ ಪ್ರಜ್ಞೆ ಕಳೆದುಕೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ನಿವಾಸಿ ಸುಶಾಂತ್ ಗೌರಿಬಿದನೂರಿನ ವಿದ್ಯಾನಿಧಿ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಾನೆ. ಬೇರೊಬ್ಬ ವಿದ್ಯಾರ್ಥಿಯ ಪುಸ್ತಕದಲ್ಲಿ ಪೇಜ್ ಹರಿದಿದೆ ಎಂಬ ಕಾರಣಕ್ಕೆ ಶಿಕ್ಷಕರು ಆತನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಶಿಕ್ಷಕರಾದ ದೇವರಾಜು, ಹೇಮಾವತಿ, ವನಜಾಕ್ಷಿ ಸೇರಿದಂತೆ ನಾಲ್ವರು ಶಿಕ್ಷಕರು ಈ ಹಲ್ಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಲ್ಲೆಯ ತೀವ್ರತೆಯಿಂದ ಸುಶಾಂತ್ ಪ್ರಜ್ಞೆ ಕಳೆದುಕೊಂಡಿದ್ದು, ಶಾಲಾ ಸಿಬ್ಬಂದಿಯೇ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸುಶಾಂತ್‌ನ ಪೋಷಕರು ಈ ಘಟನೆಯಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮಕ್ಕಳನ್ನು ರಕ್ಷಿಸಬೇಕಾದ ಶಿಕ್ಷಕರೇ ಹಲ್ಲೆ ಮಾಡುತ್ತಿದ್ದರೆ ಹೇಗೆ? ಇದು ಸಂಪೂರ್ಣ ಅಮಾನವೀಯ” ಎಂದು ಅವರು ಆರೋಪಿಸಿದ್ದಾರೆ. ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಶಾಲಾ ಆಡಳಿತ ಮತ್ತು ಶಿಕ್ಷಣ ಇಲಾಖೆಯಿಂದ ತನಿಖೆಯಾಗಬೇಕು ಎಂಬ ಬೇಡಿಕೆಯೂ ಹೆಚ್ಚಾಗುತ್ತಿದೆ. ಈ ಘಟನೆಯಿಂದ ಶಾಲಾ ಶಿಕ್ಷಣದಲ್ಲಿ ಶಿಸ್ತು ಮತ್ತು ಮಕ್ಕಳ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ.




