ಚಾಮರಾಜನಗರ: ಇಡೀ ರಾಜ್ಯ ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿ ತಲ್ಲೀನವಾಗಿದ್ದ ಸಂದರ್ಭದಲ್ಲಿ, ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ಒಂದು ದುರಂತ ನಡೆದಿದೆ. ತನ್ನ ತವರು ಮನೆಯವರು ಗೌರಿ ಹಬ್ಬಕ್ಕೆ ಆಹ್ವಾನಿಸಲಿಲ್ಲ ಎಂಬ ಕಾರಣಕ್ಕೆ ಮನನೊಂದಿದ್ದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತ ಗೃಹಿಣಿಯನ್ನು ಮಧುವನಹಳ್ಳಿ ಗ್ರಾಮದ ಸಿದ್ದರಾಜು ಅವರ ಪತ್ನಿ ವರ್ಷಿಯ ರಶ್ಮಿ(26) ಗುರುತಿಸಲಾಗಿದೆ. ತನ್ನ ತಂದೆ, ತಾಯಿ ಮತ್ತು ಅಣ್ಣನನ್ನು ಈಗಾಗಲೇ ಕಳೆದುಕೊಂಡಿದ್ದ ರಶ್ಮಿಗೆ, ತವರಿಗೆ ಕರೆದು ಅರಿಶಿನ-ಕುಂಕುಮ ಕೊಡಲು ಯಾರೂ ಇಲ್ಲ ಎನ್ನುವ ಕಾರಣಕ್ಕೆ ಆಕೆ ಜೀವನದಲ್ಲಿ ಜಿಗುಪ್ಪೆಗೊಂಡಿದ್ದಳು ಎಂದು ತಿಳಿದುಬಂದಿದೆ.
ಹಬ್ಬದ ಸಂಭ್ರಮದಲ್ಲಿದ್ದ ಇತರರನ್ನು ನೋಡಿದಾಗ, ತನಗೆ ಮಾತ್ರ ತವರು ಮನೆಯಿಂದ ಯಾವುದೇ ಕರೆ ಬರದಿರುವುದು ಅವರಿಗೆ ಗಂಭೀರವಾದ ಮಾನಸಿಕ ಆಘಾತವನ್ನು ನೀಡಿತು. ಇದರಿಂದಾಗಿ ರಶ್ಮಿ ಮನನೊಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ.
ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇಂದ್ರದಿಂದ ಟೆಲಿ-ಮನಾಸ್: ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಟೆಲಿ-ಮನಾಸ್ ಮತ್ತು ಇತರ ರಾಷ್ಟ್ರೀಯ ಸೇವೆಗಳು ಸೇರಿದಂತೆ ಆತ್ಮಹತ್ಯೆ ಸಹಾಯವಾಣಿ ಸಂಖ್ಯೆಗಳನ್ನು ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ 14416 ಎಂಬ ಟೋಲ್-ಫ್ರೀ ಸಂಖ್ಯೆಗೆ ಕರೆ ಮಾಡಬಹುದು.





