ಶಿವಮೊಗ್ಗ: ಭದ್ರಾವತಿಯಲ್ಲಿ ನಡೆದ ಈದ್ ಮಿಲಾದ್ ಆಚರಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಬಿಕೆ ಸಂಗಮೇಶ್ವರ್ ಅವರು ತಮ್ಮ ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದೇ ವೇಳೆ ಪಾಕಿಸ್ತಾನ್ ಪರ ಘೋಷಣೆ ಕೂಡ ಚರ್ಚೆಗೆ ಗುರಿಯಾಗಿದೆ.
ಸೋಮವಾರ ಭದ್ರಾವತಿ ನಗರದಲ್ಲಿ ಉಸ್ಮಾನಿಯಾ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಈದ್ ಮಿಲಾದ್ ಆಚರಣೆಯಲ್ಲಿ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮಗಳು ನಡೆದಿದ್ದವು, ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿಕೆ ಸಂಗಮೇಶ್ವರ್, “ಮುಸ್ಲಿಂ ಸಮುದಾಯದಿಂದ ಪ್ರೀತಿ ಮತ್ತು ಗೌರವ ಪಡೆದಿರುವ ನನಗೆ ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವ ಆಸೆಯಿದೆ. 20 ವರ್ಷಗಳ ಹಿಂದೆ ಈದ್ ಮಿಲಾದ್ ಮೆರವಣಿಗೆ ರದ್ದಾಗಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಇದನ್ನು ಮತ್ತೆ ಪ್ರಾರಂಭಿಸಿತು. ಅಂದಿನಿಂದ ಈ ಮೆರವಣಿಗೆ ಶಾಂತಿಯುತವಾಗಿ ನಡೆಯುತ್ತಿದೆ. ಇದಕ್ಕೆ ನಿಮ್ಮೆಲ್ಲರ ಬೆಂಬಲಕ್ಕೆ ಕೃತಜ್ಞನಾಗಿದ್ದೇನೆ,” ಎಂದು ಹೇಳಿದರು.
ಸೋದರ ಭಾವನೆಯಿಂದ ಬದುಕಬೇಕು:
ಶಾಸಕರು ತಮ್ಮ ಭಾಷಣದಲ್ಲಿ, “ಈದ್ ಮಿಲಾದ್ ಹಬ್ಬವನ್ನು ಶಾಂತಿಯಿಂದ ಆಚರಿಸಿದರೆ ಅಲ್ಲಾಹ ಎಲ್ಲರಿಗೂ ಒಳಿತನ್ನು ಮಾಡುತ್ತಾನೆ. ಎಲ್ಲರೂ ಸೋದರ ಭಾವನೆಯಿಂದ ಒಗ್ಗಟ್ಟಾಗಿ ಬದುಕಬೇಕು,” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಿಂದೂ ಮಹಾಸಭಾ ಅಧ್ಯಕ್ಷ ವಿ. ಕದಿರೇಶ್, ನಗರಸಭಾ ಸದಸ್ಯರು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿಕೆ ಶಿವಕುಮಾರ್, ಬಿಕೆ ಜಗದೀಶ್, ನಗರಸಭೆ ಉಪಾಧ್ಯಕ್ಷ ಎಎನ್‌ಎಸ್ ಮಣಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿದ್ದಬಸಪ್ಪ, ಜೆಬಿಟಿ ಬಾಬು, ಮುಸಾವೀರ್ ಬಾಷಾ, ಬಿಎಸ್ ಗಣೇಶ್ ಮುಂತಾದವರು ಉಪಸ್ಥಿತರಿದ್ದರು.
ಈದ್ ಮಿಲಾದ್ ಆಚರಣೆಯ ಸಂದರ್ಭದಲ್ಲಿ ಕೆಲವರು ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದಾರೆ ಎಂಬ ವಿಡಿಯೋ ವೈರಲ್ ಆಗಿದ್ದು, ಈ ವಿಷಯವು ಚರ್ಚೆಗೆ ಗುರಿಯಾಗಿದೆ. ಈ ಘಟನೆಯ ಜೊತೆಗೆ ಶಾಸಕರ ಹೇಳಿಕೆಯೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.





