ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ಮೆಜೆಸ್ಟಿಕ್‌ನಿಂದ ಲುಲು ಮಾಲ್‌ಗೆ ತೆರಳುತ್ತಿದ್ದ ಜಯಂತ್ ಎಂಬ ವ್ಯಕ್ತಿಯ ಕೈ ಬೆರಳನ್ನು ಕಚ್ಚಿ ತುಂಡರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಳೆ ನೀರು ತಮ್ಮ ಕಾರಿಗೆ ಹಾರಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ಜಯಂತ್‌ರನ್ನು ಹಿಂಬಾಲಿಸಿ, ಅಡ್ಡಗಟ್ಟಿ, ಹಿಗ್ಗಾಮುಗ್ಗಾ ಥಳಿಸಿ, ಅವರ ಬಲಗೈ ಬೆರಳನ್ನು ಕಚ್ಚಿ ತುಂಡು ಮಾಡಿದ್ದಾನೆ. ಈ ಘಟನೆ ಸಂಬಂಧ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.
ಭಾನುವಾರ, ಜಯಂತ್ ದಂಪತಿಗಳು ತಮ್ಮ ಕಾರಿನಲ್ಲಿ ಮೆಜೆಸ್ಟಿಕ್‌ನಿಂದ ಲುಲು ಮಾಲ್ ಕಡೆಗೆ ತೆರಳುತ್ತಿದ್ದರು. ಈ ವೇಳೆ, ಮೆಜೆಸ್ಟಿಕ್‌ನ ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ರಸ್ತೆಯಲ್ಲಿ ನಿಂತಿದ್ದ ಮಳೆ ನೀರು ಜಯಂತ್‌ರ ಕಾರಿನಿಂದ ಪಕ್ಕದ ಕಾರಿಗೆ (KA02 MT0512, I20) ಹಾರಿದೆ. ಇದರಿಂದ ಕೋಪಗೊಂಡ ಪಕ್ಕದ ಕಾರಿನ ಚಾಲಕ, ಜಯಂತ್‌ರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಜಯಂತ್ ತಕ್ಷಣ ಕ್ಷಮೆ ಕೇಳಿದರೂ, ಆ ವ್ಯಕ್ತಿ ಕಾರನ್ನು ಮೆಜೆಸ್ಟಿಕ್‌ನಿಂದ ಲುಲು ಮಾಲ್ ಅಂಡರ್‌ಪಾಸ್‌ವರೆಗೆ ಹಿಂಬಾಲಿಸಿದ್ದಾನೆ.
ಲುಲು ಮಾಲ್ ಬಳಿಯ ಅಂಡರ್‌ಪಾಸ್‌ನಲ್ಲಿ ಜಯಂತ್‌ರ ಕಾರನ್ನು ಅಡ್ಡಗಟ್ಟಿದ ಆರೋಪಿ, ದಂಪತಿಗಳೊಂದಿಗೆ ಜಗಳಕ್ಕಿಳಿದು, ಜಯಂತ್‌ರನ್ನು ಥಳಿಸಿದ್ದಾನೆ. ಈ ವೇಳೆ ಆರೋಪಿಯು ಜಯಂತ್‌ರ ಬಲಗೈ ಬೆರಳನ್ನು ಕಚ್ಚಿ ತುಂಡರಿಸಿದ್ದಾನೆ. ಗಾಯಗೊಂಡ ಜಯಂತ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಐದು ಸ್ಟಿಚ್‌ಗಳನ್ನು ಹಾಕಿ, ಆರು ತಿಂಗಳ ಕಾಲ ವಿಶ್ರಾಂತಿಯನ್ನು ಸೂಚಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಜಯಂತ್‌ಗೆ 2 ಲಕ್ಷ ರೂಪಾಯಿಗಳ ಆಸ್ಪತ್ರೆ ವೆಚ್ಚವಾಗಿದೆ.
ಈ ಘಟನೆಯ ಕುರಿತು ಜಯಂತ್ ದಂಪತಿಗಳು ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಿಸಿ, ತನಿಖೆಯನ್ನು ಆರಂಭಿಸಿದ್ದಾರೆ.