ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಬೀರಸಂದ್ರದ ಬಳಿ ಇರುವ ಫಾಕ್ಸ್‌ಕಾನ್ (Foxconn) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ತಾನು ಹೆತ್ತ ನವಜಾತ ಶಿಶುವನ್ನೇ ಶೌಚಾಲಯದಲ್ಲಿ ಕ್ರೂರವಾಗಿ ಹತ್ಯೆ ಮಾಡಿದ್ದಾಳೆ. ಅವಿವಾಹಿತೆಯಾಗಿದ್ದ ಕಾರಣಕ್ಕೆ ಭಯಗೊಂಡು ಮಗುವಿನ ಜೀವ ತೆಗೆದಿದ್ದಾಳೆ ಎಂಬ ಆಘಾತಕಾರಿ ಸತ್ಯ ಹೊರಬಂದಿದೆ.
ಘಟನೆಯ ವಿವರ :
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಸಮೀಪದ ಫಾಕ್ಸ್‌ಕಾನ್ ಕಂಪನಿಯಲ್ಲಿ ರೇಣುಕಾ ಎಂಬುವವರು ಕೆಲಸ ಮಾಡುತ್ತಿದ್ದರು. ಕೆಲಸದ ಅವಧಿಯಲ್ಲೇ ಇವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಶೌಚಾಲಯಕ್ಕೆ ಹೋದ ಸಂದರ್ಭದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಮಗು ಹುಟ್ಟಿದ ಕೂಡಲೇ ಪಾಪಿ ತಾಯಿ, ತಾನು ಮದುವೆಯಾಗದೆ ಮಗು ಹೆತ್ತ ವಿಚಾರ ಎಲ್ಲಿ ಜಗತ್ತಿಗೆ ತಿಳಿಯುತ್ತದೋ ಎಂಬ ಭಯದಿಂದ ಹಸುಗೂಸಿನ ಕತ್ತು ಕೊಯ್ದು ಶೌಚಾಲಯದಲ್ಲೇ ಎಸೆದಿದ್ದಾಳೆ.
ಬೆಳಕಿಗೆ ಬಂದಿದ್ದು ಹೇಗೆ?
ಕೃತ್ಯ ಎಸಗಿದ ನಂತರ ರೇಣುಕಾ ಏನೂ ತಿಳಿಯದವಳಂತೆ ಶೌಚಾಲಯದಿಂದ ಹೊರಬಂದಿದ್ದರು. ನಂತರ ಅದೇ ಶೌಚಾಲಯಕ್ಕೆ ಹೋದ ಬೇರೊಬ್ಬ ಸಿಬ್ಬಂದಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ನವಜಾತ ಶಿಶುವನ್ನು ಕಂಡು ದಬದಬನೆ ಓಡಿಬಂದು ಉಳಿದವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಂಪನಿಯ ಭದ್ರತಾ ಸಿಬ್ಬಂದಿ ಮತ್ತು ಮ್ಯಾನೇಜ್‌ಮೆಂಟ್ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸ್ ತನಿಖೆ ಮತ್ತು ಬಂಧನ:
ಸ್ಥಳಕ್ಕೆ ಧಾವಿಸಿದ ವಿಶ್ವನಾಥಪುರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದಾಗ, ರೇಣುಕಾ ಎಂಬಾಕೆಯೇ ಈ ಕೃತ್ಯ ಎಸಗಿದ್ದಾರೆ ಎಂಬುದು ದೃಢಪಟ್ಟಿದೆ. ತಕ್ಷಣ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು, ಹೆರಿಗೆಯ ನಂತರದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ತನ್ನದೇ ಕರುಳ ಕುಡಿಯನ್ನು ಇಷ್ಟು ಕ್ರೂರವಾಗಿ ಕೊಲ್ಲಲು ಹೇಗೆ ಮನಸ್ಸು ಬಂತು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ. ಸದ್ಯ ವಿಶ್ವನಾಥಪುರ ಪೊಲೀಸರು ರೇಣುಕಾ ವಿರುದ್ಧ ಕೊಲೆ ಪ್ರಕರಣ (FIR) ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.





