ರಾಜಧಾನಿ ಬೆಂಗಳೂರಿನ ಜನರಿಗೆ ಈಗ ಮತ್ತೊಂದು ಬೆಲೆ ಏರಿಕೆಯ ಭೀತಿ ಎದುರಾಗಿದೆ. ಹೋಟೆಲ್ ಊಟ-ತಿಂಡಿ ದರ ಏರಿಕೆಯ ಬೆನ್ನಲ್ಲೇ, ಈಗ ಆಟೋ ಪ್ರಯಾಣ ದರವೂ ಹೆಚ್ಚಳವಾಗುವ ಸಾಧ್ಯತೆ ದಟ್ಟವಾಗಿದೆ. ಆಟೋ ಎಲ್‌ಪಿಜಿ (LPG) ದರ ಏರಿಕೆಯಿಂದ ಕಂಗಾಲಾಗಿರುವ ಚಾಲಕರು, ಆಟೋ ಮೀಟರ್ ದರವನ್ನು ಪರಿಷ್ಕರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.
ದರ ಏರಿಕೆಗೆ ಕಾರಣವೇನು?
ಕೇಂದ್ರ ಸರ್ಕಾರವು ಆಟೋ ಎಲ್‌ಪಿಜಿ ದರವನ್ನು ಪ್ರತಿ ಲೀಟರ್‌ಗೆ 5.73 ರೂ. ಏರಿಕೆ ಮಾಡಿದೆ. ಮಧ್ಯಪ್ರಾಚ್ಯದ ಯುದ್ಧದ ಭೀತಿ ಮತ್ತು ಅನಿಲ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಚಾಲಕರು ಈಗಾಗಲೇ ಗಂಟೆಗಟ್ಟಲೆ ಕ್ಯೂ ನಿಂತು ಸುಸ್ತಾಗಿದ್ದರು. ಈಗ ಬೆಲೆ ಏರಿಕೆಯು ಅವರ ಜೀವನೋಪಾಯಕ್ಕೆ ಹೊಡೆತ ನೀಡಿದೆ. ಸರ್ಕಾರಿ ಬಂಕ್‌ಗಳಲ್ಲೇ ಬೆಲೆ ಏರಿಕೆ ಮಾಡಿರುವುದನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಂಕ್‌ಗಳು ದರವನ್ನು ಮತ್ತಷ್ಟು ದುಪ್ಪಟ್ಟುಗೊಳಿಸಿವೆ.
ಆಟೋ ಚಾಲಕರ ಬೇಡಿಕೆಗಳೇನು?
ಗ್ಯಾಸ್ ಬೆಲೆ ಏರಿಕೆಯನ್ನು ಸರಿದೂಗಿಸಲು ಆಟೋ ಸಂಘಟನೆಗಳು ಕನಿಷ್ಠ ದರವನ್ನು ಹೆಚ್ಚಿಸಲು ಆಗ್ರಹಿಸಿವೆ:
ಸದ್ಯದ ದರ: ಕನಿಷ್ಠ ದರ (2 ಕಿ.ಮೀ ಗೆ) 36 ರೂ. ಹಾಗೂ ನಂತರದ ಪ್ರತಿ ಕಿ.ಮೀ ಗೆ 18 ರೂ.
ಬೇಡಿಕೆಯ ದರ: ಕನಿಷ್ಠ ದರವನ್ನು 50 ರೂ. ಗೆ ಹಾಗೂ ನಂತರದ ಪ್ರತಿ ಕಿ.ಮೀ ದರವನ್ನು 25 ರೂ. ಗೆ ಏರಿಸಬೇಕು.
“ಗ್ಯಾಸ್ ಬೆಲೆ ಏರಿಕೆಯಿಂದ ಜೀವನ ನಡೆಸುವುದು ಕಷ್ಟವಾಗಿದೆ. ಸಾರಿಗೆ ಸಚಿವರು ಕೂಡಲೇ ಮಧ್ಯಸ್ಥಿಕೆ ವಹಿಸಿ ನಮ್ಮ ಸಮಸ್ಯೆ ಆಲಿಸಬೇಕು” ಎಂದು ಚಾಲಕರ ಸಂಘಟನೆಗಳು ಆಗ್ರಹಿಸಿವೆ. ಒಂದು ವೇಳೆ ಸರ್ಕಾರ ಈ ಬೇಡಿಕೆಗೆ ಮನ್ನಣೆ ನೀಡಿದರೆ, ಸಾಮಾನ್ಯ ಜನರ ಜೇಬಿಗೆ ಆಟೋ ಪ್ರಯಾಣ ದೊಡ್ಡ ಹೊರೆಯಾಗಲಿದೆ.





