ಬೆಂಗಳೂರು, (ಜೂನ್ 21): ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಜೂನ್ 22 (ಸೋಮವಾರ) ಮತ್ತು ಜೂನ್ 23 (ಮಂಗಳವಾರ)ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕೆಂದು ಬೆಸ್ಕಾಂ ತಿಳಿಸಿದೆ. ನಿಯಮಿತ ನಿರ್ವಹಣಾ ಮತ್ತು ತಾಂತ್ರಿಕ ಕಾಮಗಾರಿಗಳ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತ್ತು ಮಂಗಳವಾರ ರಾತ್ರಿ 8ರ ವರೆಗೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ.
ಸೋಮವಾರ ಮತ್ತು ಮಂಗಳವಾರ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ನಿರ್ವಹಣಾ ಕಾಮಗಾರಿಗಳಿಗಾಗಿ ಬೆಸ್ಕಾಂ ವಿದ್ಯುತ್ ಕಡಿತ ಘೋಷಣೆ
ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಕಡಿತ ಸಾಧ್ಯತೆ
ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಮನವಿ
ಸೋಮವಾರ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ:
ಸೋಮವಾರ ಸೋಲದೇವನಹಳ್ಳಿ-ಹೆಸರಘಟ್ಟ ವ್ಯಾಪ್ತಿಯ ತರಬನಹಳ್ಳಿ, ಹುರುಳಿಚಿಕ್ಕನಹಳ್ಳಿ, ಟಿ.ಬಿ. ಕ್ರಾಸ್, ಹೆಸರಘಟ್ಟ, ಚಿಕ್ಕಬಾಣಾವರ, ಗಣಪತಿ ನಗರ, ಮಾರುತಿ ನಗರ, ರಾಘವೇಂದ್ರ ಲೇಔಟ್, ಸಾಸುವೆಘಟ್ಟ, ಶಿವಕೋಟೆ, ಮಾವಳ್ಳಿಪುರ, ಬ್ಯಾಲಕೆರೆ, ಆಚಾರ್ಯ ಕಾಲೇಜು ಮುಖ್ಯ ರಸ್ತೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಇದರ ಜೊತೆಗೆ ನಗರದ ವಿವಿಧ ವಲಯಗಳಲ್ಲಿಯೂ ಪವರ್ ಕಟ್ ಇರಲಿದೆ. ಔಟರ್ ರಿಂಗ್ ರೋಡ್ ವ್ಯಾಪ್ತಿಯ ಸೆಸ್ನಾ ಬಿಸಿನೆಸ್ ಪಾರ್ಕ್, ಎಕ್ಸೋರಾ ಬಿಸಿನೆಸ್ ಪಾರ್ಕ್, ಐಬಿಸ್ ಹೋಟೆಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಪರಿಣಾಮಕ್ಕೊಳಗಾಗಲಿವೆ. ಪೂರ್ವ ವಲಯದಲ್ಲಿ ಗೋವಿಂದಪುರ, ಹೆಗ್ಡೆ ನಗರ, ಕಾರ್ಲೆ, ಗಾಂಧಿನಗರ ಹಾಗೂ ಬಿಎಂಟಿಸಿ ಡಿಪೋ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಇರಲಿದೆ.
ಕೇಂದ್ರ ವಲಯದ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಮ್ಯೂಸಿಯಂ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ರೆಸಿಡೆನ್ಸಿ ರಸ್ತೆ, ಕೇಂಬ್ರಿಡ್ಜ್ ಲೇಔಟ್ ಹಾಗೂ ಜೋಗುಪಾಳ್ಯ ಭಾಗಗಳಲ್ಲೂ ವಿದ್ಯುತ್ ವ್ಯತ್ಯಯವಾಗಲಿದೆ. ದಕ್ಷಿಣ ವಲಯದ ಅಂಜನಾಪುರ, ಆವಲಹಳ್ಳಿ, ನಾಗೇಗೌಡನ ಪಾಳ್ಯ, ನಾರಾಯಣನಗರ, ಅಮೃತನಗರ, ಕೆಂಬತ್ತಹಳ್ಳಿ ಹಾಗೂ ತಲಘಟ್ಟಪುರ ಪ್ರದೇಶಗಳಿಗೂ ಇದರ ಪರಿಣಾಮ ಬೀಳಲಿದೆ.
ಪಶ್ಚಿಮ ವಲಯದ ಮಲ್ಲೇಶ್ವರಂ, ವೈಯಾಲಿಕಾವಲ್, ಕೋದಂಡರಾಮಪುರ, ಮತ್ತಿಕೆರೆ, ಯಶವಂತಪುರ, ಗೋಕುಲ, ಎಚ್‌ಎಂಟಿ ಲೇಔಟ್ ಹಾಗೂ ಸಂಜೀವಪ್ಪ ಕಾಲೋನಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸೋಮವಾರ ವಿದ್ಯುತ್ ಕಡಿತ ಇರಲಿದೆ.
ಮಂಗಳವಾರ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ:
ಮಂಗಳವಾರ ಕೋರಮಂಗಲ 3, 4, 5 ಮತ್ತು 6ನೇ ಬ್ಲಾಕ್, ಮಡಿವಾಳ, ಆಡುಗೋಡಿ, ಜೋಗಿ ಕಾಲೋನಿ, ಸೇಂಟ್ ಜಾನ್ಸ್ ಆಸ್ಪತ್ರೆ ಸುತ್ತಮುತ್ತಲಿನ ಪ್ರದೇಶಗಳು, ಬನ್ನೇರುಘಟ್ಟ ರಸ್ತೆ, ಕೆಎಚ್‌ಬಿ ಕಾಲೋನಿ, ಕಾವೇರಿ ಲೇಔಟ್, ಎಸ್.ಜಿ. ಪಾಳ್ಯ, ಮಡಿವಾಳ ಮಾರುಕಟ್ಟೆ ಹಾಗೂ ಜಕ್ಕಸಂದ್ರ ವಿಸ್ತರಣೆ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯಗೊಳ್ಳಲಿದೆ.
ವಿದ್ಯುತ್ ಕಡಿತದಿಂದ ಮನೆಗಳು, ವ್ಯಾಪಾರ ಸಂಸ್ಥೆಗಳು ಹಾಗೂ ಕಚೇರಿಗಳಿಗೆ ತಾತ್ಕಾಲಿಕ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುಂಚಿತವಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಬೆಸ್ಕಾಂ ಮನವಿ ಮಾಡಿದೆ.





