ಭಾರತ : ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿರುವ ಭಾರತದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಯುವ ಜನಸಂಖ್ಯೆ ಇದೆ. ‘ಯುವಶಕ್ತಿ’ಯ ಬಲದ ಸಾಲಿನಲ್ಲಿ ಭಾರತ ಇಂದು ವಿಶ್ವದಲ್ಲೇ ಮುಂಚೂಣಿಯಲ್ಲಿ ನಿಲ್ಲುತ್ತದೆ. ಇಂತಹ ಭಾರತಕ್ಕೆ ಇದೀಗ ಮತ್ತೊಂದು ಬೃಹತ್ ಜಾಗತಿಕ ಅವಕಾಶ ಹುಡುಕಿ ಬರುತ್ತಿದೆ. ಹೌದು, ಯುರೋಪ್ನ ಹಲವು ಬೃಹತ್ ಕಂಪನಿಗಳು ತಮ್ಮ ಉತ್ಪಾದನೆ ಮತ್ತು ಸೇವಾ ಕೇಂದ್ರಗಳನ್ನು ಭಾರತಕ್ಕೆ ಸ್ಥಳಾಂತರಿಸಲು ತೀವ್ರ ಚಿಂತನೆ ನಡೆಸುತ್ತಿವೆ ಎಂಬ ಸುದ್ದಿ ಹೊರಬಿದ್ದಿದೆ.
ಯುರೋಪ್ ಗೆ ಯುವ ಜನತೆಯ ಕೊರತೆ: ಕಂಪನಿಗಳಿಗೆ ವಯಸ್ಸಾದವರದೇ ಬಿಸಿ!
ಇಷ್ಟು ದಿನ ಯುವಕರ ಬಲದಿಂದಲೇ ತಂತ್ರಜ್ಞಾನ ಮತ್ತು ಉದ್ಯಮ ರಂಗದಲ್ಲಿ ಮೆರೆಯುತ್ತಿದ್ದ ಯುರೋಪ್ನಲ್ಲಿ ಇದೀಗ ‘ಜನಸಂಖ್ಯಾ ಬಿಕ್ಕಟ್ಟುಎದುರಾಗಿದೆ. ಯುವ ಜನರ ಸಂಖ್ಯೆ ಗಣನೀಯವಾಗಿ ಕುಸಿದಿದ್ದು, ಹಿರಿಯ ನಾಗರಿಕರ (ವಯಸ್ಸಾದವರ) ಸಂಖ್ಯೆ ಹೆಚ್ಚುತ್ತಿದೆ. ಪರಿಣಾಮವಾಗಿ, ದಿನನಿತ್ಯದ ಉದ್ಯಮ ಕಾರ್ಯಾಚರಣೆಗೆ ಅಗತ್ಯವಿರುವ ನುರಿತ ಯುವ ಉದ್ಯೋಗಿಗಳು ಸಿಗದೆ ಯುರೋಪ್ನ ಹಲವು ಕಂಪನಿಗಳು ಭಾರಿ ನಷ್ಟ ಎದುರಿಸುತ್ತಿವೆ. ಕೆಲವು ಸಂಸ್ಥೆಗಳು ಮುಚ್ಚುವ ಹಂತಕ್ಕೂ ತಲುಪಿವೆ. ಹೀಗಾಗಿ ಯುರೋಪ್ನಲ್ಲಿ ಕಂಪನಿಗಳನ್ನು ನಡೆಸುವುದು ಸವಾಲಾಗಿ ಪರಿಣಮಿಸಿದ್ದು, ಭಾರತದಲ್ಲಿ ಹೊಸ ಶಾಖೆಗಳನ್ನು ತೆರೆಯಲು ಸಂಸ್ಥೆಗಳು ಆಸಕ್ತಿ ತೋರುತ್ತಿವೆ.
ಜರ್ಮನಿಯಲ್ಲಿ ಸಾಲು ಸಾಲು ಕಂಪನಿಗಳು ಬಂದ್!
ವರದಿಗಳ ಪ್ರಕಾರ, ಯುರೋಪ್ನ ಅತಿ ದೊಡ್ಡ ಆರ್ಥಿಕತೆಯಾದ ಜರ್ಮನಿಯಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಕೆಲಸ ಮಾಡಲು ಸೂಕ್ತ ಅರ್ಹತೆ ಹೊಂದಿರುವ ಯುವ ಉದ್ಯೋಗಿಗಳೇ ಸಿಗದೆ ಹಲವು ಕಂಪನಿಗಳು ತಮ್ಮ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡುವ ಅನಿವಾರ್ಯತೆಗೆ ಸಿಲುಕಿವೆ. ಉತ್ಪಾದನೆ ಮತ್ತು ಕೈಗಾರಿಕಾ ರಂಗದಲ್ಲಿ ಉಂಟಾಗಿರುವ ಈ ಮ್ಯಾನ್ಪವರ್ (Manpower) ಕೊರತೆಯೇ ಜರ್ಮನ್ ಉದ್ಯಮಗಳಿಗೆ ದೊಡ್ಡ ಪೆಟ್ಟಾಗಿ ಪರಿಣಮಿಸಿದೆ.
ಭಾರತದ ಉದ್ಯೋಗ ಸಮಸ್ಯೆಗೆ ಸಿಗಲಿದೆಯಾ ಶಾಶ್ವತ ಪರಿಹಾರ?
ಇಷ್ಟು ದಿನ ಜಪಾನ್, ಅಮೆರಿಕ ಹಾಗೂ ಚೀನಾ ಮೂಲದ ಕಂಪನಿಗಳು ಭಾರತದಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡುತ್ತಿದ್ದವು. ಇದೀಗ ಆ ಸಾಲಿಗೆ ಯುರೋಪಿಯನ್ ಒಕ್ಕೂಟದ (EU) ದೇಶಗಳು ಸೇರ್ಪಡೆಯಾಗುತ್ತಿರುವುದು ಭಾರತಕ್ಕೆ ಸಿಕ್ಕ ಪ್ರಮುಖ ರಾಜತಾಂತ್ರಿಕ ಹಾಗೂ ಆರ್ಥಿಕ ಗೆಲುವಾಗಿದೆ. ಯುವ ಪ್ರತಿಭೆಗಳು ಮತ್ತು ಆಧುನಿಕ ತಂತ್ರಜ್ಞಾನದ ಸೌಲಭ್ಯ ಹೊಂದಿರುವ ಭಾರತದಲ್ಲಿ ಹೊಸ ಘಟಕಗಳನ್ನು ಸ್ಥಾಪಿಸುವುದು ಯುರೋಪ್ ಕಂಪನಿಗಳಿಗೆ ಹೆಚ್ಚು ಲಾಭದಾಯಕವಾಗಿ ಕಾಣಿಸುತ್ತಿದೆ.
ಸ್ವದೇಶದಲ್ಲೇ ಸೆಟಲ್ ಆಗ್ತಾರಾ ಭಾರತೀಯ ಯುವಕರು?
ಇಲ್ಲಿಯವರೆಗೆ ಉತ್ತಮ ಕೆಲಸ ಹಾಗೂ ಕೈತುಂಬಾ ಸಂಬಳದ ಆಸೆಯಿಂದ ಭಾರತದ ಲಕ್ಷಾಂತರ ಯುವಕರು ವಿದೇಶಗಳಿಗೆ ವಲಸೆ ಹೋಗುತ್ತಿದ್ದರು. ಆದರೆ ಯುರೋಪ್ನ ಆಟೋಮೊಬೈಲ್, ಐಟಿ ಹಾಗೂ ಉತ್ಪಾದನಾ ವಲಯದ ಪ್ರಮುಖ ಕಂಪನಿಗಳೇ ಭಾರತಕ್ಕೆ ಲಗ್ಗೆ ಇಡುತ್ತಿರುವುದರಿಂದ, ನಮ್ಮ ಯುವಕರಿಗೆ ಸ್ವದೇಶದಲ್ಲೇ ಜಾಗತಿಕ ಮಟ್ಟದ ಉದ್ಯೋಗಾವಕಾಶಗಳು ಹಾಗೂ ಯೂರೋ ಮಟ್ಟದ ವೇತನ ಸಿಗುವ ಭರವಸೆ ಮೂಡಿದೆ.





