ಬೆಂಗಳೂರು, ಜುಲೈ 18: ರಾಜಧಾನಿ ಬೆಂಗಳೂರಿನ ರಸ್ತೆ, ಫುಟ್‌ಪಾತ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಿಂಗಳಾನುಗಟ್ಟಲೆ ನಿಂತಿರುವ ಬೀಡಾಡಿ (ಅನಾಥ) ವಾಹನಗಳ ವಿರುದ್ಧ ಗ್ರೇಟರ್ ಬೆಂಗಳೂರು ಆಡಳಿತ (GBA) ಹಾಗೂ ನಗರ ಸಂಚಾರಿ ಪೊಲೀಸ್ ಇಲಾಖೆ ಜಂಟಿಯಾಗಿ ಬೃಹತ್ ಟೋಯಿಂಗ್ ಕಾರ್ಯಾಚರಣೆ ಆರಂಭಿಸಿವೆ. ನಗರಾಭಿವೃದ್ಧಿ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ.
ಕಳೆದ ವಾರ ನಗರದ ವಿವಿಧ ಭಾಗಗಳಲ್ಲಿ ಗುರುತಿಸಲಾದ ಬೀಡಾಡಿ ವಾಹನಗಳಿಗೆ ಅಧಿಕಾರಿಗಳು ನೋಟಿಸ್ ಅಂಟಿಸಿ, ವಾಹನಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಿಕೊಳ್ಳಲು ಅವಕಾಶ ನೀಡಿದ್ದರು. ಆದರೆ ನಿಗದಿತ ಅವಧಿಯಲ್ಲೂ ಅನೇಕ ವಾಹನ ಮಾಲೀಕರು ಸ್ಪಂದಿಸದ ಹಿನ್ನೆಲೆಯಲ್ಲಿ ಇಂದು ಟೋಯಿಂಗ್ ಕಾರ್ಯಾಚರಣೆ ಆರಂಭಿಸಲಾಗಿದೆ.
2,700ಕ್ಕೂ ಹೆಚ್ಚು ವಾಹನಗಳ ಪಟ್ಟಿ
ನಗರದ ವಿವಿಧ ವಲಯಗಳಲ್ಲಿ 2,700ಕ್ಕೂ ಹೆಚ್ಚು ಬೀಡಾಡಿ ವಾಹನಗಳನ್ನು ಗುರುತಿಸಲಾಗಿದ್ದು, ಈಗಾಗಲೇ 1,034 ವಾಹನಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ನೋಟಿಸ್ ನೀಡಿದ ಬಳಿಕ ಎಂಟು ದಿನಗಳ ಕಾಲಾವಕಾಶ ನೀಡಲಾಗಿತ್ತು. ಅದರ ಬಳಿಕವೂ ವಾಹನಗಳನ್ನು ತೆರವುಗೊಳಿಸದ ಕಾರಣ ಅವುಗಳನ್ನು ಈಗ ಟೋಯಿಂಗ್ ಮೂಲಕ ಸ್ಥಳಾಂತರಿಸಲಾಗುತ್ತಿದೆ.
ಪ್ರತಿ ನಗರ ಪಾಲಿಕೆ ವ್ಯಾಪ್ತಿಯಲ್ಲೂ ಟೋಯಿಂಗ್ ಮಾಡಲಾದ ವಾಹನಗಳನ್ನು ಸುರಕ್ಷಿತವಾಗಿ ನಿಲ್ಲಿಸಲು ಪ್ರತ್ಯೇಕ ಜಾಗಗಳನ್ನು ಗುರುತಿಸಲಾಗಿದೆ. ವಾಹನ ಮಾಲೀಕರಿಗೆ ಟೋಯಿಂಗ್ ಬಳಿಕವೂ 15 ದಿನಗಳ ಹೆಚ್ಚುವರಿ ಅವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಸಂಬಂಧಿತ ದಂಡ ಹಾಗೂ ಟೋಯಿಂಗ್ ಶುಲ್ಕ ಪಾವತಿಸಿ ವಾಹನಗಳನ್ನು ವಾಪಸ್ ಪಡೆಯಬಹುದು.
“ರಸ್ತೆ ಸಾರ್ವಜನಿಕರ ಆಸ್ತಿ” – ಕೃಷ್ಣ ಬೈರೇಗೌಡ
ಕಾರ್ಯಾಚರಣೆಗೆ ಚಾಲನೆ ನೀಡಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, “ಮುಖ್ಯಮಂತ್ರಿ ಮಾರ್ಗದರ್ಶನದಲ್ಲಿ ಬೆಂಗಳೂರಿನಲ್ಲಿ ಶಾಶ್ವತ ಸುಧಾರಣೆ ತರಲು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ರಸ್ತೆ ಮತ್ತು ಫುಟ್‌ಪಾತ್ ಯಾರ ಖಾಸಗಿ ಆಸ್ತಿಯೂ ಅಲ್ಲ. ಅವು ಸಾರ್ವಜನಿಕರ ಆಸ್ತಿ. ತಿಂಗಳಾನುಗಟ್ಟಲೆ ವಾಹನಗಳನ್ನು ಬಿಟ್ಟು ಸಾರ್ವಜನಿಕ ಜಾಗವನ್ನು ಅತಿಕ್ರಮಣ ಮಾಡುವುದನ್ನು ಸಹಿಸುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.
ನಗರದಲ್ಲಿ ಬೀಡಾಡಿ ವಾಹನಗಳು ಹೆಚ್ಚಾಗುವುದರಿಂದ ಸಂಚಾರಕ್ಕೆ ತೊಂದರೆಯಾಗುವುದರ ಜೊತೆಗೆ ನಗರದ ಸೌಂದರ್ಯಕ್ಕೂ ಧಕ್ಕೆಯಾಗುತ್ತಿದೆ. “ಬೆಂಗಳೂರು ಗುಜರಿಯಂತಾಗಲು ಅವಕಾಶ ನೀಡುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
ಸಾರ್ವಜನಿಕರು ತಮ್ಮ ಪ್ರದೇಶಗಳಲ್ಲಿ ಇಂತಹ ಬೀಡಾಡಿ ವಾಹನಗಳು ಕಂಡುಬಂದರೆ ಟ್ರಾಫಿಕ್ ಪೊಲೀಸರ ‘ಅಸ್ತ್ರಂ’ (Astra) ಆ್ಯಪ್ ಮೂಲಕ ಮಾಹಿತಿ ನೀಡುವಂತೆ ಸಚಿವರು ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲೂ GBA ಹಾಗೂ ಟ್ರಾಫಿಕ್ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆಯನ್ನು ಇನ್ನಷ್ಟು ವಿಸ್ತರಿಸಲಿವೆ.





