ಬೆಳಗಾವಿ: ಇಂದು ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣಾ ಕಣವು ರಣಾಂಗಣವಾಗಿ ಪರಿವರ್ತನೆಯಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತ ಕಾರ್ಯಕರ್ತರ ನಡುವೆ ಪೊಲೀಸರ ಎದುರೇಯೇ ತೀವ್ರ ಘರ್ಷಣೆ ನಡೆದಿದೆ. ಚುನಾವಣೆಯನ್ನು ಮುಂದೂಡುವ ಉದ್ದೇಶದಿಂದ ಸೆಕ್ರೆಟರಿಯನ್ನು ಅಪಹರಿಸುವ ಯತ್ನ ನಡೆದಿದ್ದು, ಇದು ಘಟನೆಗೆ ಕಾರಣವಾಗಿದೆ.
ಚುನಾವಣೆ ಮುಂದೂಡಬೇಕು ಎಂಬ ಠರಾವು ಪಾಸ್ ಮಾಡಬೇಕಿದ್ದ ಸೆಕ್ರೆಟರಿ ಭೀಮಪ್ಪ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಕಾರಿನಲ್ಲಿ ಅಪಹರಿಸಲು ಯತ್ನಿಸಿದ್ದರು. ಡಿಸಿಸಿ ಬ್ಯಾಂಕ್ ಎದುರು ಅವರನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದಾಗ, ಬಿಜೆಪಿ ಕಾರ್ಯಕರ್ತರು ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಕಾರಿನ ಗಾಜನ್ನು ಒಡೆಯಲು ಪ್ರಯತ್ನಿಸಿದ ಸಂದರ್ಭದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಗಲಾಟೆ ಉಂಟಾಗಿದೆ. ನೂರಾರು ಬಿಜೆಪಿ ಬೆಂಬಲಿಗರು ಕಾರನ್ನು ಸುತ್ತುವರೆದು ಭೀಮಪ್ಪ ಅವರನ್ನು ಕಾರಿನಿಂದ ಕೆಳಗಿಳಿಸಿ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ.
ಘರ್ಷಣೆ ತೀವ್ರಗೊಂಡ ಸಂದರ್ಭದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಸಮಾಧಾನಪಡಿಸಲು ಯತ್ನಿಸಿದ್ದಾರೆ. ಆದರೆ, ಅದು ಸಫಲವಾಗದೇ ಪೊಲೀಸರ ಎದುರೇಯೇ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಕೈಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ. ಕಾಂಗ್ರೆಸ್ ಸದಸ್ಯರ ಸಂಖ್ಯೆ ಕಡಿಮೆಯಿರುವ ಕಾರಣಕ್ಕೆ ಚುನಾವಣೆ ಮುಂದೂಡುವ ಹುನ್ನಾರದೊಂದಿಗೆ ಸೆಕ್ರೆಟರಿಯನ್ನು ಅಪಹರಿಸಲು ಯತ್ನಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಈ ಘಟನೆಯಿಂದ ಚುನಾವಣಾ ಪ್ರಕ್ರಿಯೆಗೆ ತೊಂದರೆಯಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಪೊಲೀಸ್ ಮತ್ತು ಚುನಾವಣಾ ಅಧಿಕಾರಿಗಳ ಹೇಳಿಕೆಗಳನ್ನು ಕಾಯಬೇಕಾಗಿದೆ.





