ಬೆಳಗಾವಿ: ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದರು. ಈ ರ್ಯಾಲಿಯಲ್ಲಿ ರಾಜ್ಯ ಸರ್ಕಾರದ ಸಾಧನೆಗಳನ್ನು ಶ್ಲಾಘಿಸಿದ ಅವರು, ಬಿಜೆಪಿಯ ಆರ್ಥಿಕ ನೀತಿಗಳು ಮತ್ತು ದರ ಏರಿಕೆಯನ್ನು ತೀವ್ರವಾಗಿ ಖಂಡಿಸಿದರು.
ಕಾಂಗ್ರೆಸ್ ಸರ್ಕಾರದ ಸಾಧನೆ
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಲ್ಲಿ 80 ಸಾವಿರ ಕೋಟಿ ರೂಪಾಯಿಗಳನ್ನು ರಾಜ್ಯದ ಜನರ ಖಾತೆಗೆ ನೇರವಾಗಿ ವರ್ಗಾಯಿಸಿರುವುದಾಗಿ ಹೇಳಿದರು. “ಪಂಚ ಗ್ಯಾರಂಟಿ ಯೋಜನೆಯ ಮೂಲಕ ರಾಜ್ಯದ ಇತಿಹಾಸದಲ್ಲಿ ಅತ್ಯುತ್ತಮ ಆಡಳಿತವನ್ನು ನೀಡಿದ್ದೇವೆ. ಈ ಶ್ರೇಯಸ್ಸು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ,” ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಚುನಾವಣೆ ಸಂದರ್ಭದಲ್ಲಿ ಬೆಳಗಾವಿಯಿಂದಲೇ ಬಿಜೆಪಿಯ ವಿರುದ್ಧ ಹೋರಾಟ ಆರಂಭಿಸಿದ್ದನ್ನು ಸ್ಮರಿಸಿದ ಅವರು, “ಅದರ ಫಲವಾಗಿ ಕರ್ನಾಟಕದಲ್ಲಿ 136 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದೆವು. ಸರ್ಕಾರ ಬಂದ 100 ದಿನಗಳಲ್ಲಿ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ,” ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬಿಜೆಪಿಯ ವಿರುದ್ಧ ಟೀಕೆ
ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದ ಸಚಿವೆ, “ಬಿಜೆಪಿಯವರಿಗೆ ಜನರಿಗೆ ಕೆಲಸ ಮಾಡಲು ಏನೂ ಇಲ್ಲ. ಈಗ ಹೊಸ ನಾಟಕವೊಂದನ್ನು ಆರಂಭಿಸಿದ್ದಾರೆ. ಜನಾಕ್ರೋಶ ರ್ಯಾಲಿ ಎಂದು ಕರೆದು ತಮ್ಮ ಪಕ್ಷದ ಆಂತರಿಕ ಕಚ್ಚಾಟವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ,” ಎಂದು ಆರೋಪಿಸಿದರು. “ಯಾವತ್ತೂ ಬಿಜೆಪಿ ಕರ್ನಾಟಕದಲ್ಲಿ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಕುದುರೆ ವ್ಯಾಪಾರದ ಮೂಲಕ ಅಧಿಕಾರ ಹಿಡಿದಿದ್ದಾರೆ,” ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಿಡಿಕಾರಿದರು.
ಜನಾಕ್ರೋಶ ಸಮಾವೇಶದ ಸಂದರ್ಭದಲ್ಲೇ ಕೇಂದ್ರ ಸರ್ಕಾರವು ಸಿಲಿಂಡರ್ ದರವನ್ನು 50 ರೂಪಾಯಿ ಹೆಚ್ಚಿಸಿತು ಎಂದು ಉಲ್ಲೇಖಿಸಿದ ಅವರು, ಅವತ್ತೇ ವಿಜಯೇಂದ್ರ ಅವರು ಗಂಟುಮೂಟೆ ಕಟ್ಟಿಕೊಂಡು ಶಿವಮೊಗ್ಗಕ್ಕೆ ಓಡಿಹೋದರು. ಈಗ ಬಿಜೆಪಿಯವರಿಗೆ ಜನರ ಮುಂದೆ ಮುಖ ತೋರಿಸಲು ಆಗುತ್ತಿಲ್ಲ ಎಂದು ಲೇವಡಿ ಮಾಡಿದರು.
ದರ ಏರಿಕೆಯ ವಿರುದ್ಧ ವಾಗ್ದಾಳಿ
ಯುಪಿಎ ಸರ್ಕಾರದ ಅವಧಿಯಲ್ಲಿ ಒಂದು ಸಿಲಿಂಡರ್‌ನ ಬೆಲೆ 450 ರೂಪಾಯಿಯಾಗಿದ್ದರೆ, ಇಂದಿಗೂ ದರ ಏರಿಕೆಯು ಮುಂದುವರಿದಿದೆ ಎಂದು ಸಚಿವೆ ಟೀಕಿಸಿದರು. ಪಹಲ್ಗಾಮ್ ಘಟನೆಯ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ಪೂರ್ವ-ಪಾವತಿಯ ಟಿಕೆಟ್‌ನೊಂದಿಗೆ ಆಯಾ ರಾಜ್ಯಗಳಿಗೆ ಕಳುಹಿಸಬೇಕಿತ್ತು. ಆದರೆ ಕೇಂದ್ರ ಸರ್ಕಾರ ವಿಮಾನ ದರವನ್ನು ಹೆಚ್ಚಿಸಿತು. ಇದಕ್ಕೆ ಅವರಿಗೆ ನಾಚಿಕೆ ಆಗಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.
ಗೃಹಲಕ್ಷ್ಮಿ ಯೋಜನೆಯ ಹಣ ವಿತರಣೆ
ಗೃಹಲಕ್ಷ್ಮಿ ಯೋಜನೆಯ ಹಣದ ವಿಳಂಬದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವೆ, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ವಾರದೊಳಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಅವರೇ ಈ ಬಗ್ಗೆ ಘೋಷಣೆ ಮಾಡುವಂತೆ ನನಗೆ ಸೂಚಿಸಿದ್ದಾರೆ. ಮುಂದಿನ ವಾರದಲ್ಲಿ ಹಣ ಖಾತೆಗೆ ಜಮಾ ಆಗಲಿದೆ ಎಂದು ಭರವಸೆ ನೀಡಿದರು.