ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಈಜುಕೊಳಗಳಲ್ಲಿ ದರ ಏರಿಕೆಯಾಗಿದ್ದು, ಬೇಕಾಬಿಟ್ಟಿ ದರ ನಿಗದಿಗೆ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೇಸಿಗೆಯ ಬಿರು ಬಿಸಿಲು ಮತ್ತು ಶಾಲಾ ರಜೆಯ ಸಂದರ್ಭದಲ್ಲಿ ಈಜುಕೊಳಗಳ ಬಳಕೆ ಹೆಚ್ಚಾಗಿದೆ. ಆದರೆ, ಬಿಬಿಎಂಪಿ ಈಜುಕೊಳಗಳಲ್ಲಿ ಏಕರೂಪವಿಲ್ಲದ ದರ ನಿಗದಿಯಾಗಿದೆ. ಈ ಹಿಂದೆ ಮಕ್ಕಳಿಗೆ 25 ರೂ. ಮತ್ತು ವಯಸ್ಕರಿಗೆ 30 ರೂ. ಇದ್ದ ದರವನ್ನು ಈಗ ಎಲ್ಲರಿಗೂ 50 ರೂ.ಗೆ ಏರಿಸಲಾಗಿದೆ. ಆದರೆ, ಕೆಲವು ಈಜುಕೊಳಗಳ ಉಸ್ತುವಾರಿಗಳು ಇದಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ.

ಮಹಾಲಕ್ಷ್ಮೀ ಲೇಔಟ್‌ನ ಬಿಬಿಎಂಪಿ ಈಜುಕೊಳದಲ್ಲಿ 40 ನಿಮಿಷಗಳಿಗೆ 50 ರೂ. ನಿಗದಿಯಾಗಿದ್ದು, ಮಕ್ಕಳು ಮತ್ತು ವಯಸ್ಕರಿಗೆ ಒಂದೇ ದರ ಇದೆ. ಇದಕ್ಕೆ ಪೋಷಕರು, ಮಕ್ಕಳಿಗೆ ದರ ಕಡಿಮೆ ಮಾಡುವಂತೆ ಒತ್ತಾಯಿಸಿದ್ದಾರೆ. ವಿಜಯನಗರದಲ್ಲಿ ಮಕ್ಕಳಿಗೆ 40 ರೂ. ಮತ್ತು ವಯಸ್ಕರಿಗೆ 50 ರೂ. ನಿಗದಿಯಾಗಿದ್ದು, ಪ್ರತಿ ಕಡೆ ವಿಭಿನ್ನ ದರಗಳು ಕಂಡುಬರುತ್ತಿವೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬೇಕಾಬಿಟ್ಟಿ ದರ ವಸೂಲಿ ಮತ್ತು ಸಮ್ಮರ್ ಕ್ಯಾಂಪ್‌ಗಳಿಗೆ ಅನಗತ್ಯ ವಸೂಲಿಗೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಪೋಷಕರು ದರ ಇಳಿಕೆಗೆ ಒತ್ತಾಯಿಸುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದೇ ಎಂದು ಕಾದುನೋಡಬೇಕಿದೆ.





