ಬ್ಯಾಟರಾಯನಪುರ: ಈ ಹಿಂದೆ ಸರ್ಕಾರಿ ಕಚೇರಿಗಳ ಮೇಲಷ್ಟೇ ಹಾರುತ್ತಿದ್ದ ರಾಷ್ಟ್ರಧ್ವಜವನ್ನು ದೇಶದ ಪ್ರತಿ ಮನೆಯ ಮೇಲೂ ಹಾರುವಂತೆ ಮಾಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಸಿ.ತಮ್ಮೇಶ್ ಗೌಡ ಅಭಿಪ್ರಾಯಪಟ್ಟರು.
78ನೇ ಸ್ವಾತಂತ್ರ್ಯ ಮಹೋತ್ಸವದ ಪ್ರಯುಕ್ತ, ಬ್ಯಾಟರಾಯನಪುರ ಗ್ರಾಮಾಂತರ ಮಂಡಲ ಬಿಜೆಪಿ ಯುವ ಮೋರ್ಚಾ ಆಯೋಜಿಸಿದ್ದ ‘ತಿರಂಗಯಾತ್ರೆ’ ಬೃಹತ್ ಬೈಕ್ ರ‍್ಯಾಲಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ”ನರೇಂದ್ರ ಮೋದಿಯವರು ದೇಶಕ್ಕೆ ದೊರೆತಿರುವ ಒಬ್ಬ ಅಪ್ರತಿಮ ನಾಯಕರಾಗಿದ್ದು, ಅವರ ನೇತೃತ್ವದಲ್ಲಿ ಭಾರತ ಅತ್ಯುತ್ತಮ ಅಭಿವೃದ್ಧಿಯ ಮೂಲಕ ಜಾಗತಿಕ ಮಟ್ಟದಲ್ಲಿ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ.
ವಿಕಸಿತ ಭಾರತದ ಕನಸನ್ನು ನನಸು ಮಾಡುವ ದಿಸೆಯಲ್ಲಿ ಮೋದಿಯವರು ದೇಶವನ್ನು ಆರ್ಥಿಕ ಕ್ಷೇತ್ರದಲ್ಲಿ ಪ್ರಗತಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. 2014ರಲ್ಲಿ ಜಾಗತಿಕ ಮಟ್ಟದ ಆರ್ಥಿಕ ಪ್ರಗತಿಯಲ್ಲಿ ಹನ್ನೊಂದನೇ ಸ್ಥಾನದಲ್ಲಿದ್ದ ಭಾರತವನ್ನು ಮೂರನೆಯ ಸ್ಥಾನಕ್ಕೆ ಏರಿಸುವ ಮೂಲಕ ಅಮೇರಿಕಾದಂತ ದೈತ್ಯ ಆರ್ಥಿಕ ಪ್ರಗತಿಯ ರಾಷ್ಟ್ರವು ಸಹ ಭಾರತವನ್ನು ಕಂಡು ಅಸೂಯೆ ಪಡುವಂತೆ ಮಾಡಿರುವುದು ಮೋದಿಯವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
ಆಪರೇಷನ್ ಸಿಂಧೂರವನ್ನು ಯಶಸ್ವಿಯಾಗಿ ಕೈಗೊಳ್ಳುವ ಮೂಲಕ ಉಗ್ರವಾದಿಗಳಿಗೆ ಮತ್ತು ಉಗ್ರರನ್ನು ಪೋಷಿಸುವ ರಾಷ್ಟ್ರಗಳಿಗೆ ನಮ್ಮ ಸೈನಿಕ ಶಕ್ತಿಯ ಬಲವೇನು, ತಂತ್ರಜ್ಞಾನದ ಸಾಮರ್ಥ್ಯವೇನು ಎಂಬುದನ್ನು ಜಗಜ್ಜಾಹೀರು ಮಾಡಿದ್ದಾರೆ. ಜಗತ್ತಿನ 192 ದೇಶಗಳ ಪೈಕಿ ಬಹುತೇಕ ರಾಷ್ಟ್ರಗಳು ನರೇಂದ್ರ ಮೋದಿಯವರ ಆಡಳಿತ ನೀತಿ, ಅಭಿವೃದ್ಧಿ ಕಾರ್ಯಗಳು, ವಿದೇಶಾಂಗ ನೀತಿಯನ್ನು ಒಪ್ಪಿಕೊಂಡಿದ್ದು, ಮೋದಿಯವರನ್ನು ಬೆಂಬಲಿಸುತ್ತಿವೆ.
‘ಹರ್ ಘರ್ ತಿರಂಗಾ’ ಅಭಿಯಾನದ ಮೂಲಕ ಈ ಹಿಂದೆ ಸರ್ಕಾರಿ ಕಚೇರಿಗಳ ಮೇಲಷ್ಟೇ ಹಾರುತ್ತಿದ್ದ ರಾಷ್ಟ್ರಧ್ವಜ ಇದೀಗ ದೇಶದ ಪ್ರತಿ ಮನೆಯ ಮೇಲೆ ಹಾರುತ್ತಿದ್ದು, ಜನರಲ್ಲಿ ರಾಷ್ಟ್ರಪ್ರೇಮ, ದೇಶಭಕ್ತಿಯನ್ನು ಉದ್ದೀಪನ ಗೊಳಿಸುವಲ್ಲಿ ನರೇಂದ್ರ ಮೋದಿಯವರು ಯಶಸ್ವಿಯಾಗಿದ್ದಾರೆ. ಇಂತಹ ಅಪ್ರತಿಮ ನಾಯಕನನ್ನು ಬೆಂಬಲಿಸುವುದು ನಮ್ಮೆಲ್ಲರ ಆದ್ಯತೆಯಾಗಬೇಕು ಎಂದರು.
ಬಾಗಲೂರು ವಿನಾಯಕ ದೇವಾಲಯದ ಸಮೀಪದ ಮೈದಾನದಿಂದ ಆರಂಭವಾದ ‘ತಿರಂಗಯಾತ್ರೆ’ ಯ ಬೃಹತ್ ಬೈಕ್ ರ‍್ಯಾಲಿಯು ಬಾಗಲೂರು ವೃತ್ತ, ಸಾತನೂರು, ಹೊಸಹಳ್ಳಿ, ವಿದ್ಯಾನಗರ ಕ್ರಾಸ್ ಮಾರ್ಗವಾಗಿ ಸಾಗಿ ಹುಣಸಮಾರನಹಳ್ಳಿಯ ಎ2ಬಿ ಸಮೀಪ ಮುಕ್ತಾಯಗೊಂಡಿತು.
ಬ್ಯಾಟರಾಯನಪುರ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಹನುಮಂತಗೌಡ, ಪ್ರಧಾನ ಕಾರ್ಯದರ್ಶಿಗಳಾದ ಬೇಗೂರು ಮಹೇಶ್, ಪ್ರತಾಪ್ ಗೌಡ, ಬಿ.ಎಸ್.ಅನಿಲ್ ಕುಮಾರ್, ನವೀನ್ ಕುಮಾರ್, ಗ್ರಾಮಾಂತರ ಮಂಡಲ ಯುವ ಮೋರ್ಚಾ ಅಧ್ಯಕ್ಷ ತಿಮ್ಮೇಗೌಡ, ಪ್ರಧಾನ ಕಾರ್ಯದರ್ಶಿ ಮುರಳಿ ಕೆ, ಮದನ್‌ಕುಮಾರ್, ಉಪಾಧ್ಯಕ್ಷ ಆಂಜಿನಪ್ಪ (ಮಯೂರ್), ಬೋವಿ ನಿಗಮದ ಮಾಜಿ ನಿರ್ದೇಶಕ ರವಿಕುಮಾರ್, ಎಸ್.ಸಿ.ಮೋರ್ಚಾ ಅಧ್ಯಕ್ಷ ಶಾಂಭವಿ ರವಿ, ಚೊಕ್ಕನಹಳ್ಳಿ ನಾಗರಾಜ್, ಕಿರಣ್, ಚಂದ್ರಶೇಖರ್(ಅಪ್ಪಿ), ಸುನಿಲ್(ಹರ್ಷ), ಟಿ.ವೆಂಕಟೇಶ್, ರಾಜಶೇಖರ್, ನಾರಾಯಣಸ್ವಾಮಿ, ವೆಂಕಟೇಶ್, ಪ್ರಶಾಂತ್, ಸಂತೋಷ್ ಸೇರಿದಂತೆ ಯುವ ಮೋರ್ಚಾದ ನೂರಾರು ಕಾರ್ಯಕರ್ತರು, ಬಿಜೆಪಿ ಮುಖಂಡರಿದ್ದರು.