ಬಾಗಲಕೋಟೆ ಜಿಲ್ಲೆಯ ಕನ್ನೋಳಿ ಗ್ರಾಮದಲ್ಲಿ ಹೊಸ ಕಾರು ಖರೀದಿಸಿ ಊರಿಗೆ ಬಂದಿದ್ದ ಯುವಕನನ್ನು ಕೊಲೆ ಮಾಡಿ, ಅವನ ಮೃತದೇಹ ಸಮೇತ ಕಾರಿಗೆ ಬೆಂಕಿ ಹಚ್ಚಿದ ಭೀಕರ ಘಟನೆ ನಡೆದಿದೆ. ಈ ಕೊಲೆಗೆ ಕಾರಣ ಆರೋಪಿಯ ಪತ್ನಿಯೊಂದಿಗೆ ಮೃತನಿಗೆ ಇದ್ದ ಶಂಕಿತ ಅನೈತಿಕ ಸಂಬಂಧ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತನು ಸೋಮು @ ಸೋಮಲಿಂಗಪ್ಪ ಪಡಸಲಗಿ (ವಯಸ್ಸು ೩೬). ದೊಡ್ಡಪ್ಪನ ಮಗ ಸದಾಶಿವ ಪಡಸಲಗಿ ಈ ಕೊಲೆಯ ಮುಖ್ಯ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ. ಸದಾಶಿವನು ತನ್ನ ಪತ್ನಿಯೊಂದಿಗೆ ಸೋಮಲಿಂಗಪ್ಪಗೆ ಅನೈತಿಕ ಸಂಬಂಧ ಇದೆ ಎಂಬ ಶಂಕೆಯಿಂದ ಈ ಹಿಂದೆಯಿಂದಲೂ ಇಬ್ಬರ ನಡುವೆ ವೈಷಮ್ಯವಿತ್ತು ಎನ್ನಲಾಗಿದೆ.
ಸೋಮಲಿಂಗಪ್ಪ ಹೊಸ ಕಾರು ಖರೀದಿಸಿ, ಅದಕ್ಕೆ ಪೂಜೆ ಮಾಡಿಸಿ ಊರಿಗೆ ಮರಳುತ್ತಿದ್ದರು. ಕನ್ನೋಳಿ ಗ್ರಾಮದ ಬಳಿ ಕಾದು ನಿಂತಿದ್ದ ಸದಾಶಿವ ಪಡಸಲಗಿ ಮತ್ತು ಅವನ ಸಂಗಾತಿಗಳು ಬೇರೊಂದು ಕಾರಿನಲ್ಲಿ ಬಂದು ಸೋಮಲಿಂಗಪ್ಪನನ್ನು ತಡೆದಿದ್ದಾರೆ. ಕಾರಿನಿಂದ ಇಳಿದ ತಕ್ಷಣ ಸೋಮಲಿಂಗಪ್ಪನಿಗೆ ಚಾಕು ಇರಿದು ಕೊಲೆಗೈದಿದ್ದಾರೆ. ಮೃತದೇಹ ಕಾರಿನ ಪಕ್ಕದಲ್ಲೇ ಕುಸಿದು ಬಿದ್ದಿತ್ತು.
ಬಳಿಕ ಆರೋಪಿಗಳು ಮೃತದೇಹವನ್ನು ಕಾರಿನೊಳಗೆ ಇಟ್ಟು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಘಟನೆಯನ್ನು ಮರೆಮಾಚಲು ಪ್ರಯತ್ನಿಸಿದ್ದಾರೆ. ಈ ಘಟನೆಯಲ್ಲಿ ಮುಖ್ಯ ಆರೋಪಿ ಸದಾಶಿವ ಪಡಸಲಗಿ ಜೊತೆಗೆ ರವಿ ಪಾಟೀಲ್ ಮತ್ತು ನಾವಿ ಎಂಬ ಇಬ್ಬರು ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





