ಕೆಜಿಎಫ್ ಸಿನಿಮಾದಿಂದ ಇಡೀ ದೇಶ ಸಲಾಂ ರಾಕಿಭಾಯ್ ಅಂತ ಯಶ್‌ರನ್ನ ಆಡಿ ಹೊಗಳಿತ್ತು. ಇದೀಗ ರಾಮಾಯಣ ಸಿನಿಮಾದಿಂದ ವಿಶ್ವದ ಗಮನ ಸೆಳೆಯಲು ಸಜ್ಜಾಗಿದ್ದಾರೆ ನಮ್ಮ ಹೆಮ್ಮೆಯ ಕನ್ನಡಿಗ ಯಶ್. ಹೌದು.. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ರಾಮಾಯಣ ಸೆಟ್‌ಗೆ ಭೇಟಿ ನೀಡಿರೋದು ತಡವಾಗಿ ಬೆಳಕಿಗೆ ಬಂದಿದೆ. ಇಷ್ಟಕ್ಕೂ ಮೋದಿ ಏನಂದ್ರು..? ಸಿನಿಮಾ ಯಾವ ಹಂತದಲ್ಲಿದೆ.
ಬರೀ ನಟನಷ್ಟೇ ಅಲ್ಲ. ಕನ್ನಡ ಚಿತ್ರರಂಗದ ರಾಯಭಾರಿ. ಸದಾ ಕನ್ನಡವನ್ನು ಉತ್ತುಂಗದಲ್ಲಿ ನೋಡಬಯಸುವ ಹಾಗೂ ಅದಕ್ಕಾಗಿ ಹಗಲಿರುಳು ದುಡಿಯೋ ಹೆಮ್ಮೆಯ ಕನ್ನಡಿಗ. ಕೆಜಿಎಫ್ ಸಿನಿಮಾಗಳಿಂದ ಯಶ್ ಜೊತೆಗೆ ನಮ್ಮ ಸ್ಯಾಂಡಲ್‌ವುಡ್‌ಗೂ ಹೊಸ ಆಯಾಮ ತಂದುಕೊಟ್ಟರು. ಕನ್ನಡ ಚಿತ್ರಗಳು ಕೂಡ ಸಾವಿರ ಕೋಟಿ ಗಳಿಸಬಲ್ಲವು ಅನ್ನೋದಕ್ಕೆ ಪೀಠಿಕೆ ಹಾಕಿದ್ರು.
ಮಾಡೋ ಕೆಲಸಕ್ಕೆ ಶ್ರದ್ಧೆ, ಭಕ್ತಿಯಿಂದ ಶ್ರಮ ಹಾಕಿದ್ರೆ ಸಕ್ಸಸ್ ಕಟ್ಟಿಟ್ಟ ಬುತ್ತಿ ಅನ್ನೋದನ್ನ ಅರಿತಿರೋ ಯಶ್‌ಗೆ ಸ್ಪಷ್ಟ ಗುರಿಯಿದೆ. ಅದರ ಬೆನ್ನು ಹತ್ತಿ ಸಾಗುವ ಛಲವಿದೆ. ಹಠವಿದೆ. ಅದೇ ಇಂದು ಅವರನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸುವಂತೆ ಮಾಡಿದೆ. ಅದೆಷ್ಟೋ ಮಂದಿ ಕಲಾವಿದರು ಹಾಗೂ ತಂತ್ರಜ್ಞರಿಗೆ ಸ್ಫೂರ್ತಿಯಾಗಿದೆ. ಕೆಜಿಎಫ್ ಚಿತ್ರದಿಂದ ಯಶ್‌ಗೆ ಇಡೀ ಇಂಡಿಯಾ ಸಲಾಂ ರಾಕಿಭಾಯ್ ಅಂತಿತ್ತು. ಅದನ್ನೀಗ ನೆಕ್ಸ್ಟ್ ಲವೆಲ್‌ಗೆ ಕೊಂಡೊಯ್ಯಲು ತೀರ್ಮಾನಿಸಿದ್ದಾರೆ ಯಶ್.
ಟಾಕ್ಸಿಕ್ ಸಿನಿಮಾನ ಕೈಗೆತ್ತಿಕೊಂಡಿದ್ದ ರಾಕಿಭಾಯ್, ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೂಡಿ ನಟನೆ ಜೊತೆಗೆ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ನಡಿ ತನ್ನ ದುಡಿಮೆ ಮತ್ತೆ ಚಿತ್ರರಂಗಕ್ಕೇ ಅರ್ಪಿಸೋಕೆ ಸಜ್ಜಾಗಿದ್ದಾರೆ. ಟಾಕ್ಸಿಕ್ ಜೊತೆ ಜೊತೆಗೆ ಬಾಲಿವುಡ್‌ನಲ್ಲಿ ಮಹತ್ವದ ಹೆಜ್ಜೆ ಇಟ್ಟಿರೋ ಯಶ್, ರಾಮಾಯಣ ಸಿನಿಮಾ ಶುಭಾರಂಭ ಮಾಡಿದ್ದಾರೆ. ನಮಿತ್ ಮಲ್ಹೋತ್ರ ಜೊತೆಗೂಡಿ ರಾಮಾಯಣ ಸಿನಿಮಾ ಕೂಡ ಯಶ್ ನಿರ್ಮಾಣ ಮಾಡ್ತಿದ್ದು, ರಾವಣನಾಗಿ ಪ್ರಧಾನ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಸಾವಿರಾರು ಕೋಟಿಯಲ್ಲಿ ತಯಾರಾಗ್ತಿರೋ ರಾಮಾಯಣ ಸಿನಿಮಾ ಒಂದಲ್ಲ ಎರಡೆರಡು ಭಾಗಗಳಲ್ಲಿ ಪ್ರೇಕ್ಷಕರ ಮುಂದೆ ಬರ್ತಿದ್ದು, ಮೊದಲ ಭಾಗ 2026ರ ದೀಪಾವಳಿಗೆ ಬೆಳ್ಳಿತೆರೆ ಬೆಳಗಲಿದೆ. ಎರಡನೇ ಭಾಗ 2027ರ ದೀಪಾವಳಿಗೆ ಬಿಡುಗಡೆ ಆಗಲಿದ್ದು, ದಂಗಲ್ ಡೈರೆಕ್ಟರ್ ನಿತೇಶ್ ತಿವಾರಿ ಇದಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಇನ್ನು ಪ್ರಧಾನ ಭೂಮಿಕೆಯಲ್ಲಿ ರಣ್‌ಬೀರ್ ಕಪೂರ್ ರಾಮನಾಗಿ, ಸೀತೆಯಾಗಿ ಸಾಯಿ ಪಲ್ಲವಿ ಮಿಂಚು ಹರಿಸಲಿದ್ದಾರೆ.
ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಹಾಗೂ ಹನ್ಸ್ ಝಿಮ್ಮರ್ ರಾಮಾಯಣ ಸಿನಿಮಾಗೆ ಸಂಗೀತ ಸಂಯೋಜನೆ ಮಾಡ್ತಿದ್ದು, ಮುಂಬೈನ ಬೃಹತ್ ಸೆಟ್‌ಗಳಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ವಿಶೇಷ ಅಂದ್ರೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಜೊತೆ ರಾಮಾಯಣ ಚಿತ್ರದ ಶೂಟಿಂಗ್ ಸೆಟ್‌ಗಳಿಗೆ ಭೇಟಿ ನೀಡಿದ್ದಾರೆ. ಹೌದು.. ವೇವ್ಸ್ ಸಮ್ಮಿಟ್ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಮುಂಬೈಗೆ ತೆರಳಿದ್ದ ಮೋದಿ, ಹಾಗೆಯೇ ಪಕ್ಕದಲ್ಲಿ ಶೂಟಿಂಗ್ ನಡೆಯುತ್ತಿದ್ದ ರಾಮಾಯಣ ಸೆಟ್‌ಗೂ ವಿಸಿಟ್ ಹಾಕಿದ್ದಾರೆ.
ರಾಮಾಯಣ ಚಿತ್ರದ ಸೆಟ್ಸ್, ಅದು ತಯಾರಾಗ್ತಿರೋ ಗುಣಮಟ್ಟವನ್ನು ನೋಡಿ ಸ್ವತಃ ಮೋದಿ ದಂಗಾಗಿದ್ದಾರೆ. ಭಾರತ ಶ್ರೀಮಂತವಾದಂತಹ ಸಂಸ್ಕೃತಿ ಹಾಗೂ ಇತಿಹಾಸ ಹೊಂದಿದೆ. ಅದನ್ನು ಈಗಿನ ಪೀಳಿಗೆಗೆ ಸಿನಿಮಾ ಮೂಲಕ ಕಟ್ಟಿಕೊಡೋ ಪ್ರಯತ್ನ ಮಾಡ್ತಿರೋದನ್ನು ಶ್ಲಾಘಿಸಿ, ಅಭಿನಂದಿಸಿದ್ದಾರೆ. ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಿದ್ದ ಮೋದಿ, ಒಬ್ಬ ಸನಾತನಿಯಾಗಿ ರಾಮನನ್ನು ಎಷ್ಟರ ಮಟ್ಟಿಗೆ ಆರಾಧಿಸ್ತಾರೆ ಅನ್ನೋದು ಎಲ್ಲರಿಗೂ ಗೊತ್ತೇಯಿದೆ. ಹಾಗಾಗಿ ಮೋದಿ ರಾಮಾಯಣ ಸೆಟ್‌ಗೆ ವಿಸಿಟ್ ಮಾಡಿ, ಚಿತ್ರತಂಡವನ್ನು ಶ್ಲಾಘಿಸಿರೋದು ಇಡೀ ತಂಡಕ್ಕೆ ಮತ್ತಷ್ಟು ಜೋಶ್ ತುಂಬಿದಂತಾಗಿದೆ.
ಕೆಜಿಎಫ್ ಸಿನಿಮಾ ರಿಲೀಸ್ ಆದ ಬಳಿಕ ನಟ ಯಶ್‌ರನ್ನ ಮೋದಿ ಭೇಟಿ ಆಗಿದ್ದರು. ಭಾರತೀಯ ಚಿತ್ರರಂಗಕ್ಕೆ ಯಶ್ ಕೊಡುಗೆಯನ್ನ ಅಭಿನಂದಿಸಿದ್ದರು. ಇದೀಗ ಮತ್ತೊಮ್ಮೆ ಯಶ್ ಡ್ರೀಮ್ ಪ್ರಾಜೆಕ್ಟ್ ರಾಮಾಯಣಕ್ಕೆ ಮೋದಿ ಬೆನ್ನೆಲುಬಾಗಿ ನಿಂತಿದ್ದಾರೆ. ಸದ್ಯ ಯಶ್ ಕೂಡ ಯುದ್ಧ ಸನ್ನಿವೇಶಗಳ ಚಿತ್ರೀಕರಣಕ್ಕಾಗಿ ಮುಂಬೈನಲ್ಲೇ ಇದ್ದಾರೆ. ರಾಮ ರಣ್‌ಬೀರ್ ವರ್ಸಸ್ ರಾವಣ ಯಶ್ ಕಾಳಗ ಹೇಗಿರಲಿದೆ ಅನ್ನೋ ಕ್ಯೂರಿಯಾಸಿಟಿ ಎಲ್ಲರಲ್ಲೂ ಇದೆ.