ಮುಂಬೈ (ಅ.25): ಬಾಲಿವುಡ್‌ನ ಖ್ಯಾತ ಹಿರಿಯ ನಟ ಹಾಗೂ ಹಾಸ್ಯ ನಟ ಸತೀಶ್ ಶಾ (Satish Shah) ಅವರು ಶನಿವಾರ ಮಧ್ಯಾಹ್ನ 2:30ರ ಸುಮಾರಿಗೆ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಸತೀಶ್ ಶಾ ಅವರು ಕಳೆದ ಕೆಲವು ವರ್ಷಗಳಿಂದ ಮೂತ್ರಪಿಂಡದ ತೀವ್ರ ಸಮಸ್ಯೆಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಮೂತ್ರಪಿಂಡ ಕಸಿ (Kidney Transplant) ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು ಎಂದು ಅವರ ಮ್ಯಾನೇಜರ್ ದೃಢಪಡಿಸಿದ್ದಾರೆ.
ಸತೀಶ್ ಶಾ ಅವರು ‘ಸಾರಾಭಾಯ್ ವರ್ಸಸ್ ಸಾರಾಭಾಯ್’ ಮತ್ತು ‘ಜಾನೆ ಭಿ ದೋ ಯಾರೋ’ ಎಂಬ ಟಿವಿ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದರು. ‘ಮೈ ಹೂ ನಾ’ (2004), ‘ಕಲ್ ಹೋ ನಾ ಹೋ’ (2003), ‘ಫನಾ’ (2006), ಮತ್ತು ‘ಓಂ ಶಾಂತಿ ಓಂ’ (2007) ಸೇರಿದಂತೆ ಅನೇಕ ಯಶಸ್ವೀ ಬಾಲಿವುಡ್ ಚಿತ್ರಗಳಲ್ಲಿ ಖ್ಯಾತಿ ಗಳಿಸಿದ್ದರು. 2008 ರಲ್ಲಿ, ಅವರು ‘ಕಾಮಿಡಿ ಸರ್ಕಸ್’ ಎಂಬ ಟಿವಿ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾಗಿಯೂ ಕಾರ್ಯನಿರ್ವಹಿಸಿದ್ದರು.
ಟಿಬಿ ಶ್ರೀನಿವಾಸ್ ನಿರ್ದೇಶನದ 1998ರ ‘ಶಾಂತಿ ಶಾಂತಿ ಶಾಂತಿ’ ಚಿತ್ರದಲ್ಲಿ ಅನಂತ ಮೂರ್ತಿ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರದಲ್ಲಿ ಅಬ್ಬಾಸ್ ಮತ್ತು ಮಾಧವನ್ ಅವರಂತಹ ನಟರೂ ಕಾಣಿಸಿಕೊಂಡಿದ್ದರು. ತನ್ನದೇ ಆದ ಅಧಿಕೃತ ವೆಬ್‌ಸೈಟ್ ಹೊಂದಿದ್ದ ಕನ್ನಡದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ‘ಶಾಂತಿ ಶಾಂತಿ ಶಾಂತಿ’ ಪಾತ್ರವಾಗಿತ್ತು.
ಸತೀಶ್ ಶಾ ಅವರ ನಿಧನದ ಬಗ್ಗೆ ಮಾಹಿತಿ ನೀಡಿದ ಹಾಸ್ಯನಟ ಜಾನಿ ಲಿವರ್, “ಸುಮಾರು 40 ವರ್ಷಗಳ ಕಾಲ ಅವರು ನನ್ನ ಸ್ನೇಹಿತರಾಗಿದ್ದರು. ಅವರು ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದರು. ಕೋಲ್ಕತ್ತಾದಲ್ಲಿ ಮೂತ್ರಪಿಂಡ ಕಸಿ ಮಾಡಲಾಗಿತ್ತು. ಇಂದು ರಾತ್ರಿ ಊಟ ಮಾಡಿದ ನಂತರ ಇದ್ದಕ್ಕಿದ್ದಂತೆ ಕುಸಿದು ಬಿದ್ದು ನಿಧನರಾದರು” ಎಂದು ಹೇಳಿದರು.
ಚಲನಚಿತ್ರ ನಿರ್ಮಾಪಕ ವಿವೇಕ್ ಶರ್ಮಾ ಅವರು, “ಶನಿವಾರ ಬೆಳಿಗ್ಗೆ ನಾನು ಸತೀಶ್ ಶಾ ಜೊತೆ ಮಾತನಾಡುತ್ತಿದ್ದೆ. ನಾವು ಪ್ರತಿದಿನ ಮಾತನಾಡುತ್ತಿದ್ದೆವು, ಪರಸ್ಪರ ರೀಲ್‌ಗಳು ಮತ್ತು ಆಸಕ್ತಿದಾಯಕ ವೀಡಿಯೊಗಳನ್ನು ಕಳುಹಿಸುತ್ತಿದ್ದೆವು” ಎಂದು ಹೇಳಿದರು.
ಮುಂಬೈನ ಮಾಂಡ್ವಿಯಲ್ಲಿ ಜನಿಸಿದ ಸತೀಶ್ ಶಾ ಅವರು ಕ್ಸೇವಿಯರ್ಸ್ ಕಾಲೇಜಿನಲ್ಲಿ ಮತ್ತು ನಂತರ ಪುಣೆಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (FTII)ಯಲ್ಲಿ ಶಿಕ್ಷಣ ಪೂರ್ಣಗೊಳಿಸಿದರು. 1972 ರಲ್ಲಿ ಸತೀಶ್ ಡಿಸೈನರ್ ಮಧು ಷಾ ಅವರನ್ನು ವಿವಾಹವಾದರು. ಸತೀಶ್ ಶಾ 1970 ರಲ್ಲಿ ‘ಭಗವಾನ್ ಪರಶುರಾಮ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.





