ಬೆಂಗಳೂರು (ಮಾ.14): ಕನ್ನಡ ಚಿತ್ರರಂಗದಲ್ಲಿ ಸದಾ ವಿಭಿನ್ನವಾಗಿ ಆಲೋಚಿಸುವ ನಟ ಹಾಗೂ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಅವರು ಮತ್ತೊಮ್ಮೆ ತಮ್ಮ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಹುಟ್ಟಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಂಡಿರುವ ಒಂದು ನಿಗೂಢ ಪೋಸ್ಟ್ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಮೂಡಿಸಿದೆ..
ಉಪೇಂದ್ರ ಅವರು ತಮ್ಮ ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ ಖಾತೆಗಳಲ್ಲಿ ಒಂದು ವಿಶೇಷ ಸಂದೇಶವನ್ನು ಹಂಚಿಕೊಂಡಿದ್ದಾರೆ. “ನಾಳೆ ಬೆಳಗ್ಗೆ 10 ಗಂಟೆಗೆ ನಾನು ಒಂದು ಲಿಂಕ್ ಪೋಸ್ಟ್ ಮಾಡ್ತೀನಿ. ಆದರೆ ಅದನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬಾರದು ಎಂದು ನನಗೆ ಸೂಚನೆ ಇದೆ. ಅದಕ್ಕಾಗಿ ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಅದನ್ನು ಡಿಲೀಟ್ ಮಾಡಬಹುದು. ನೀವು ಅದನ್ನು ನೋಡಿದರೆ ಯಾರಿಗೂ ಹೇಳಬೇಡಿ. ಸದ್ಯಕ್ಕೆ ಇದು ನಮ್ಮ ನಡುವೆ ಮಾತ್ರ ಇರಲಿ. ಲಿಂಕ್ ನೋಡಿ ಸುಮ್ಮನಿದ್ದುಬಿಡಿ,” ಎಂದು ಬರೆದಿದ್ದಾರೆ.
ಈ ರೀತಿಯ ಪೋಸ್ಟ್ ಮಾಡಿದ ತಕ್ಷಣವೇ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ. ಏಕೆಂದರೆ, ಉಪೇಂದ್ರ ಅವರು ಯಾವಾಗಲೂ ವಿಭಿನ್ನವಾಗಿ ಯೋಚಿಸುವ ಹಾಗೂ ಪ್ರಚಾರ ಮಾಡುವ ಶೈಲಿಗೆ ಹೆಸರಾಗಿದ್ದಾರೆ. ಹೀಗಾಗಿ ಈ ಪೋಸ್ಟ್ ಕೂಡ ಯಾವುದೋ ವಿಶೇಷ ಘೋಷಣೆ ಮಾಡಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಮೂಡಿದೆ.
ಕೆಲವರು ಇದು ಅವರ ಮುಂದಿನ ಸಿನಿಮಾದ ಘೋಷಣೆ ಇರಬಹುದು ಎಂದು ಊಹಿಸುತ್ತಿದ್ದಾರೆ. ಇನ್ನೂ ಕೆಲವರು ಹೊಸ ಚಿತ್ರದ ಟೀಸರ್ ಅಥವಾ ಫಸ್ಟ್ ಲುಕ್ ಬಿಡುಗಡೆಯ ಬಗ್ಗೆ ಇರಬಹುದು ಎಂದು ಅಂದಾಜು ಮಾಡುತ್ತಿದ್ದಾರೆ. ಇನ್ನೊಂದು ವಲಯದಲ್ಲಿ ಇದು ಅವರ ರಾಜಕೀಯ ಪಕ್ಷ ‘ಪ್ರಜಾಕೀಯ’ ಕುರಿತು ಯಾವುದಾದರೂ ಮಹತ್ವದ ಅಪ್‌ಡೇಟ್ ಇರಬಹುದು ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.
ಉಪೇಂದ್ರ ಅವರ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿರುವ “ಲಿಂಕ್ ನೋಡಿ ಸುಮ್ಮನಿದ್ದುಬಿಡು” ಎಂಬ ಮಾತು ಅಭಿಮಾನಿಗಳ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ಸಾಮಾನ್ಯವಾಗಿ ಯಾವುದಾದರೂ ಸಿನಿಮಾ ಅಥವಾ ಪ್ರಾಜೆಕ್ಟ್ ಘೋಷಣೆ ಮಾಡಿದರೆ ಅದನ್ನು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲಾಗುತ್ತದೆ. ಆದರೆ ಈ ಬಾರಿ ಅವರು ಅದನ್ನು ಯಾರಿಗೂ ಹೇಳಬೇಡಿ ಎಂದು ಹೇಳಿರುವುದು ಇನ್ನಷ್ಟು ಸಸ್ಪೆನ್ಸ್ ಮೂಡಿಸಿದೆ.





