ಬಹುಭಾಷೀಯ ನಟಿ ತ್ರಿಶಾ ಕೃಷ್ಣನ್ ಮತ್ತೆಮತ್ತೆ ವಿವಾಹ ವದಂತಿಗಳ ಕೇಂದ್ರಬಿಂದುವಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ 42ನೇ ವಯಸ್ಸಿನಲ್ಲಿ ಅವರು ಚಂಡೀಗಢದ ಉದ್ಯಮಿಯೊಬ್ಬರನ್ನು ವಿವಾಹವಾಗುತ್ತಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು.
ಈ ವದಂತಿಗೆ ತ್ರಿಶಾ ಅವರೇ ಇನ್ಸ್ಟಾಗ್ರಾಮ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. “ಜನ ನನಗಾಗಿ ನನ್ನ ಲೈಫ್ ಪ್ಲ್ಯಾನ್ ಮಾಡಿದಾಗ ನನಗೆ ತುಂಬಾ ಇಷ್ಟ. ಅವರು ನನ್ನ ಹನಿಮೂನ್ ಸಹ ನಿಗದಿ ಮಾಡುವುದನ್ನೂ ಕಾಯ್ತಿದ್ದೀನಿ” ಎಂದು ಬರೆದು, ಬೇಸರವನ್ನು ಸೂಚಿಸುವ ಎಮೋಜಿ ಹಾಕಿದ್ದಾರೆ. ಈ ಪೋಸ್ಟ್ ಮೂಲಕ ವಿವಾಹದ ಅಧಿಕೃತ ಘೋಷಣೆ ಯಾವುದೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತ್ರಿಶಾ ಅವರ ವೈಯಕ್ತಿಕ ಜೀವನವು ಹಿಂದೆಯೂ ಸುದ್ದಿಯಾಗಿದೆ. ನಟ ಸಿಂಬು ಮತ್ತು ರಾಣಾ ದಗ್ಗುಬಾಟಿ ಅವರೊಂದಿಗೆ ಡೇಟಿಂಗ್ ಸುದ್ದಿಗಳು ಹಬ್ಬಿದ್ದವು. 2015ರಲ್ಲಿ ಉದ್ಯಮಿ ವರುಣ್ ಮಣಿಯನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ವಿವಾಹದ ನಂತರ ಸಿನಿಮಾಗಳಲ್ಲಿ ಅಭಿನಯಿಸುವ ಬಗ್ಗೆ ಇಬ್ಬರಿಗೂ ಉಂಟಾದ ಭಿನ್ನಾಭಿಪ್ರಾಯದ ಕಾರಣದಿಂದಾಗಿ ಈ ಸಂಬಂಧ ರದ್ದಾಯಿತು. ಇದುವರೆಗೆ, ನಟಿ ಅಥವಾ ಅವರ ಕುಟುಂಬದಿಂದ ವಿವಾಹದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ.