ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ (Toxic) ಚಿತ್ರದ ಸ್ಪೆಷಲ್ ಟೀಸರ್ ಬಿಡುಗಡೆ ಆಗುತ್ತಿದ್ದಂತೆ ಸಿನಿರಂಗದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ. ಯಶ್ ಅವರ ಜನ್ಮದಿನದ ಅಂಗವಾಗಿ ಬಿಡುಗಡೆಯಾದ ಈ ಟೀಸರ್ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದು ದಾಖಲೆ ಬರೆದಿದೆ. ಬೋಲ್ಡ್ ವಿಷಯ ಮತ್ತು ಸ್ಟೈಲಿಷ್ ಮೇಕಿಂಗ್ ಮೂಲಕ ‘ಟಾಕ್ಸಿಕ್’ ಟೀಸರ್ ಸಿನಿಪ್ರೇಮಿಗಳಷ್ಟೇ ಅಲ್ಲ, ದೇಶದ ಪ್ರಮುಖ ನಿರ್ದೇಶಕರು ಹಾಗೂ ನಟರ ಗಮನವೂ ಸೆಳೆದಿದೆ.
ಟೀಸರ್‌ನಲ್ಲಿ ಕಾಣಿಸಿಕೊಳ್ಳುವ ಯಶ್ ಅವರ ಆಕ್ರಮಣಕಾರಿ ಅವತಾರ ಅಭಿಮಾನಿಗಳನ್ನು ಅಚ್ಚರಿ ಮೂಡಿಸಿದೆ. ಇದುವರೆಗೂ ನೋಡಿರದ ಲುಕ್, ಶರೀರ ಭಾಷೆ ಮತ್ತು ಆಟಿಟ್ಯೂಡ್ ಯಶ್ ಅವರ ನಟನಾ ಪಯಣಕ್ಕೆ ಮತ್ತೊಂದು ಹೊಸ ಆಯಾಮವನ್ನು ನೀಡುತ್ತಿದೆ.
ಈ ಪ್ರಯತ್ನವನ್ನು ಮೆಚ್ಚಿಕೊಂಡವರಲ್ಲಿ ಸ್ಯಾಂಡಲ್‌ವುಡ್ ಬಾದ್‌ಷಾ ಕಿಚ್ಚ ಸುದೀಪ್ ಮೊದಲಿಗರಾಗಿ ನಿಂತಿದ್ದಾರೆ. ಟೀಸರ್ ನೋಡಿ ಟ್ವೀಟ್ ಮಾಡಿರುವ ಸುದೀಪ್, “ಪ್ರವಾಹದ ವಿರುದ್ಧ ಈಜಲು ಯಾವಾಗಲೂ ಹೆಚ್ಚಿನ ಧೈರ್ಯ ಬೇಕಾಗುತ್ತದೆ. ನೀವು ಇಟ್ಟಿರುವ ಈ ಹೊಸ ಹೆಜ್ಜೆಯು, ನೀವು ಗುರಿಯಾಗಿಸಿಕೊಂಡಿರುವ ಆ ಸ್ಥಾನಕ್ಕೆ ನಿಮ್ಮನ್ನು ಇನ್ನಷ್ಟು ಹತ್ತಿರವಾಗಿಸಲಿ. ಯಶಸ್ಸಿನ ಹಾದಿಯಲ್ಲಿ ಹೀಗೆಯೇ ಸಾಗಲಿ” ಎಂದು ಯಶ್ ಅವರಿಗೆ ಶುಭ ಹಾರೈಸಿದ್ದಾರೆ. ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯಶ್ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ.
ಇದೇ ವೇಳೆ, ಬೋಲ್ಡ್ ಹಾಗೂ ಇಂಟೆನ್ಸ್ ಸಿನಿಮಾಗಳಿಗೆ ಹೆಸರಾಗಿರುವ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕೂಡ ‘ಟಾಕ್ಸಿಕ್’ ಟೀಸರ್‌ಗೆ ಫಿದಾ ಆಗಿದ್ದಾರೆ. “ಟಾಕ್ಸಿಕ್ ಟೀಸರ್ ನೋಡಿ ಅಕ್ಷರಶಃ ಫಿದಾ ಆದೆ. ಸ್ಟೈಲ್, ಆಟಿಟ್ಯೂಡ್ ಮತ್ತು ಮಾಸ್ ಎನರ್ಜಿ… ಪಕ್ಕಾ ಕಾವೇರಿದೆ. ಜನ್ಮದಿನದ ಶುಭಾಶಯಗಳು ಯಶ್” ಎಂದು ಅವರು ಟ್ವೀಟ್ ಮಾಡಿ ತಂಡದ ಶ್ರಮವನ್ನು ಶ್ಲಾಘಿಸಿದ್ದಾರೆ.
ನಿರ್ದೇಶಕ ರಾಮ್ ಗೋಪಾಲ್ ವರ್ಮಾ (ಆರ್‌ಜಿವಿ) ಕೂಡ ಈ ಟೀಸರ್‌ಗೆ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಅವರ ಅವತಾರ ಮತ್ತು ಟ್ರೈಲರ್ ನೋಡಿದ ಮೇಲೆ, ಗೀತು ಮೋಹನ್‌ದಾಸ್ ಮಹಿಳಾ ಸಬಲೀಕರಣದ ಪರಮ ಸಂಕೇತ ಎನ್ನುವುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ಈ ಮಟ್ಟದ ದೃಶ್ಯ ವೈಭವವನ್ನು ಅವರು ಕಟ್ಟಿಕೊಟ್ಟಿರುವುದು ನಂಬಲು ಸಾಧ್ಯವಾಗುತ್ತಿಲ್ಲ” ಎಂದು ಗೀತು ಮೋಹನ್‌ದಾಸ್ ಅವರ ನಿರ್ದೇಶನ ಶಕ್ತಿಯನ್ನು ಕೊಂಡಾಡಿದ್ದಾರೆ.
ಇಷ್ಟೇ ಅಲ್ಲದೆ, ಬಾಲಿವುಡ್‌ನ ಖ್ಯಾತ ನಿರ್ದೇಶಕ-ನಿರ್ಮಾಪಕ ಕರಣ್ ಜೋಹರ್ ಅವರಿಂದಲೂ ‘ಟಾಕ್ಸಿಕ್’ ಟೀಸರ್‌ಗೆ ಭರ್ಜರಿ ಮೆಚ್ಚುಗೆ ಸಿಕ್ಕಿದೆ. “ವಾವ್! ಎಂತಹ ಅದ್ಭುತ ಜನ್ಮದಿನದ ಘೋಷಣೆ. ನಿಜಕ್ಕೂ ರಾಕಿಂಗ್ ಆಗಿದೆ. ಯಶ್ ಜನ್ಮದಿನದ ಶುಭಾಶಯಗಳು.. ಇದು ಧೂಳೆಬ್ಬಿಸುವಂತಿದೆ!” ಎಂದು ಕರಣ್ ಜೋಹರ್ ಹೇಳಿದ್ದಾರೆ.
ಸದ್ಯ ‘ಟಾಕ್ಸಿಕ್’ ಟೀಸರ್ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ 6 ಮಿಲಿಯನ್‌ಗಿಂತ ಹೆಚ್ಚು ವೀಕ್ಷಣೆ ಪಡೆದುಕೊಂಡಿದ್ದು, ಯಶ್ ಅವರ ಸ್ಟಾರ್‌ಡಂ ಮತ್ತು ಈ ಚಿತ್ರದ ಮೇಲಿರುವ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಗೀತು ಮೋಹನ್‌ದಾಸ್ ಅವರ ವಿಭಿನ್ನ ಮೇಕಿಂಗ್, ಯಶ್ ಅವರ ಬೋಲ್ಡ್ ಆಯ್ಕೆ ಮತ್ತು ತಾಂತ್ರಿಕ ಗುಣಮಟ್ಟ ಎಲ್ಲಾ ಸೇರಿ ‘ಟಾಕ್ಸಿಕ್’ ಅನ್ನು ಭಾರತೀಯ ಸಿನಿರಂಗದ ಅತ್ಯಂತ ನಿರೀಕ್ಷಿತ ಸಿನಿಮಾಗಳ ಸಾಲಿಗೆ ಸೇರಿಸಿದೆ.





