ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಸಿನಿಮಾ ತೆರೆಯ ಮೇಲೆ ಅಬ್ಬರಿಸುವ ‘ಆಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ, ನಿಜ ಜೀವನದಲ್ಲಿ ಹಲವರ ಪಾಲಿಗೆ ‘ಕರುಣಾ ಪ್ರಿನ್ಸ್’ ಆಗಿದ್ದಾರೆ. ಧ್ರುವ ಸರ್ಜಾ ಸ್ಕ್ರೀನ್ ಮೇಲೆ ಮಾತ್ರ ಅಲ್ಲ, ಜೀವನದಲ್ಲೂ ಹೀರೋ ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಸಿನಿಮಾದಲ್ಲಿ ಮಾಸ್ ಡೈಲಾಗ್‌ಗಳು, ಆಕ್ಷನ್ ಸೀನ್ಸ್‌ಗಳಿಂದ ಮಿಂಚೋ ಈ ಸ್ಟಾರ್, ಈಗ ಮಾನವೀಯತೆ ಮೂಲಕ ಜನರ ಮನ ಗೆದ್ದಿದ್ದಾರೆ. ಬ್ಯುಸಿ ಶೆಡ್ಯೂಲ್ ಇದ್ದರೂ, ಒಬ್ಬ ಮಗುವಿನ ಜೀವ ಉಳಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿರುವುದು ವೈರಲ್ ಆಗ್ತಿದೆ.
ಧ್ರುವ ಸರ್ಜಾ ಅಂದ್ರೆ ಹೀರೋ, ಫಿಟ್ನೆಸ್, ಫ್ಯಾನ್ಸ್, ಫ್ಯಾಮಿಲಿ ಮ್ಯಾನ್ ಇವೆಲ್ಲ ಒಂದೇ ಪ್ಯಾಕೇಜ್. ಪ್ರತಿ ಭಾನುವಾರ ಮನೆಯ ಬಳಿ ಬರುವ ಅಭಿಮಾನಿಗಳನ್ನು ಭೇಟಿಯಾಗಿ ಸಮಯ ಕೊಡೋದು ಅವರ ಹಬ್ಬದಂತೇ. ಜಿಮ್‌ನಲ್ಲಿ ಬೆವರು ಸುರಿಸಿ, ನಂತರ ಫ್ಯಾನ್ಸ್ ಜೊತೆ ಕನೆಕ್ಟ್ ಆಗೋ ಈ ಸ್ಟಾರ್, ಈಗ ಅದಕ್ಕಿಂತ ದೊಡ್ಡ ಕೆಲಸ ಮಾಡಿದ್ದಾರೆ. ಎನರ್ಜಿಟಿಕ್ ಸ್ಟಾರ್ ಧ್ರುವ ಸರ್ಜಾ ಈಗ ‘ಕೆಡಿ’ ಸಿನಿಮಾದ ಹವಾ ಎಬ್ಬಿಸಲು ರೆಡಿಯಾಗುತ್ತಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ ಈ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದ್ದು, ಧ್ರುವ ಫುಲ್ ಬ್ಯುಸಿ ಇದ್ದಾರೆ.
KD ಪ್ರಚಾರ ಮಧ್ಯೆಯೂ ಮಗುವಿಗಾಗಿ ಮಿಡಿದ ‘ಧ್ರುವ’ತಾರೆ
16 ಕೋಟಿಯ ‘SMA’ ಕಾಯಿಲೆ ವಿರುದ್ಧ ಧ್ರುವ ಸಮರ..!
ಆದರೆ, ಈ ಬ್ಯುಸಿ ಶೆಡ್ಯೂಲ್ ಮಧ್ಯೆಯೂ ಅವರು ತೋರಿದ ಮಾನವೀಯತೆ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿಮಾ ಪ್ರಚಾರಕ್ಕಿಂತ ಮಗುವಿನ ಪ್ರಾಣ ಉಳಿಸುವುದೇ ಮುಖ್ಯ ಎಂದು ಧ್ರುವ ಸರ್ಜಾ ಸಾರ್ವಜನಿಕರಲ್ಲಿ ಮನವಿ ಮಾಡಿರುವುದು ಅವರ ದೊಡ್ಡಗುಣಕ್ಕೆ ಸಾಕ್ಷಿ. 2 ವರ್ಷದ ಮಗು ಸಾಯಿ ಚಿರಾಗ್ ‘SMA’ ಎಂಬ ಅಪರೂಪದ ಹಾಗೂ ಭಯಾನಕ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದಾನೆ. ಮಗುವಿನ ಉಸಿರಾಟ ಮತ್ತು ಚಲನೆಯನ್ನೇ ಕಿತ್ತುಕೊಳ್ಳುವ ಈ ರೋಗದ ಚಿಕಿತ್ಸೆಗೆ ಬರೋಬ್ಬರಿ 16 ಕೋಟಿ ಬೇಕು. ಇಷ್ಟು ದೊಡ್ಡ ಮೊತ್ತವನ್ನು ಹೊಂದಿಸಲಾಗದೆ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದ ಪೋಷಕರಿಗೆ ಧ್ರುವ ಸರ್ಜಾ ಆಸರೆಯಾಗಿದ್ದಾರೆ. ಮಗುವನ್ನು ಎದುರು ನಿಲ್ಲಿಸಿಕೊಂಡು, “ನಿಮ್ಮ 100 ರೂಪಾಯಿ ಕೂಡ ಈ ಕಂದನ ಜೀವ ಉಳಿಸಬಹುದು” ಎಂದು ಧ್ರುವ ಮಾಡಿರುವ ಮನವಿ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಸಾಮಾನ್ಯವಾಗಿ ಸ್ಟಾರ್ ನಟರು ಶೂಟಿಂಗ್ ಇಲ್ಲದಿದ್ದರೆ ಜಿಮ್, ಮನೆ ಅಥವಾ ಪಾರ್ಟಿ ಅಂತ ಬ್ಯುಸಿಯಾಗಿರುತ್ತಾರೆ. ಆದರೆ ಧ್ರುವ ಶೈಲಿಯೇ ಬೇರೆ. ಪ್ರತಿ ಭಾನುವಾರ ತಮ್ಮ ಮನೆ ಮುಂದೆ ಸಾಲುಗಟ್ಟಿ ನಿಲ್ಲುವ ಅಭಿಮಾನಿಗಳನ್ನು ಭೇಟಿ ಮಾಡುವುದು ಅವರಿಗೆ ಅಚ್ಚುಮೆಚ್ಚು. ಮಗುವಿನ ಚಿಕಿತ್ಸೆಯ ಬಗ್ಗೆ ವಿಡಿಯೋ ಮಾಡುವಾಗ, ಧ್ರುವ ಮಗುವಿನ ಕಾಯಿಲೆಯ ಬಗ್ಗೆ ಕ್ಯಾಮೆರಾ ಮುಂದೆ ಮಾತನಾಡಿ ಮಗುವಿನ ತಂದೆ ತಾಯಿ ಮನಸ್ಸಿಗೆ ನೋವು ಮಾಡದೆ, ಕೇವಲ ಸಹಾಯಕ್ಕಾಗಿ ಕೇಳಿಕೊಂಡಿರುವುದು ಅವರ ಪಕ್ವತೆಗೆ ಸಾಕ್ಷಿ. ಲಿಖಿತ ರೂಪದಲ್ಲಿ ಕಾಯಿಲೆಯ ಗಂಭೀರತೆಯನ್ನು ವಿವರಿಸುವ ಮೂಲಕ ಧ್ರುವ ಸ್ಮಾರ್ಟ್ ಆಗಿ ಜನರನ್ನು ತಲುಪಿದ್ದಾರೆ.
“100 ರೂಪಾಯಿ ಸಾಕು” ಧ್ರುವ ಸರ್ಜಾ ಕರುಣೆಯ ಕರೆ!
ಜೀವ ಉಳಿಸಲು ಧ್ರುವ ಕ್ಯಾಂಪೇನ್..ನೀವೂ ಕೈಜೋಡಿಸಿ
ಇದು ಧ್ರುವ ಮಾಡಿರುವ ಮೊದಲ ಸಹಾಯವೇನಲ್ಲ. ಕಳೆದ ವರ್ಷವಷ್ಟೇ ಕಣ್ಣಿನ ಪೊರೆಯಿಂದ ಬಳಲುತ್ತಿದ್ದ ಪುಟ್ಟ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿಸಿದ್ದರು. ಅಷ್ಟೇ ಏಕೆ, ಅಪಘಾತದಲ್ಲಿ ಬ್ರೈನ್ ಡೆಡ್ ಆದ ಅಭಿಮಾನಿಯ ಆಸ್ಪತ್ರೆ ಖರ್ಚು ವೆಚ್ಚಗಳನ್ನು ತಾವೇ ಹೊತ್ತುಕೊಂಡು ಸಂಕಷ್ಟದ ಸಮಯದಲ್ಲಿ ಆ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿದ್ದರು. ಪ್ರಚಾರ ಪಡೆಯದೆ ಗುಟ್ಟಾಗಿ ಮಾಡುವ ಇಂತಹ ಸಹಾಯಗಳು ಈಗ ಒಂದೊಂದಾಗಿ ಬೆಳಕಿಗೆ ಬರುತ್ತಿದ್ದು, ಧ್ರುವ ಸರ್ಜಾ ಕೇವಲ ತೆರೆಯ ಮೇಲೆ ಮಾತ್ರವಲ್ಲ, ಜನರ ಹೃದಯದಲ್ಲೂ ‘ರಿಯಲ್ ಪ್ರಿನ್ಸ್’ ಎಂದು ಸಾಬೀತುಪಡಿಸುತ್ತಿದ್ದಾರೆ.
ಧ್ರುವ ಸರ್ಜಾ ತಮ್ಮ ಅಭಿಮಾನಿಗಳನ್ನು ‘VIP’s’ ಎಂದು ಕರೆಯುತ್ತಾರೆ. ಈಗ ಅದೇ ಅಭಿಮಾನಿ ಸೈನ್ಯಕ್ಕೆ ಧ್ರುವ ಕರೆ ಕೊಟ್ಟಿದ್ದಾರೆ. “ನಿಮಗೆ ಹಣ ನೀಡಲು ಸಾಧ್ಯವಾಗದಿದ್ದರೆ ಪರವಾಗಿಲ್ಲ, ದಯವಿಟ್ಟು ಈ ವಿಡಿಯೋ ಶೇರ್ ಮಾಡಿ” ಎಂದು ಅವರು ಕೇಳಿಕೊಂಡಿರುವ ರೀತಿ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ‘ಕೆಡಿ’ ಸಿನಿಮಾದಲ್ಲಿ ಧ್ರುವ ಅಬ್ಬರಿಸುವುದನ್ನು ನೋಡಲು ಕಾಯುತ್ತಿರುವ ಫ್ಯಾನ್ಸ್, ಈಗ ಮಗುವಿನ ಪ್ರಾಣ ಉಳಿಸಲು ಧ್ರುವ ಜೊತೆ ಕೈ ಜೋಡಿಸಿದ್ದಾರೆ. ಆಕ್ಷನ್ ಪ್ರಿನ್ಸ್ ತೋರಿಸಿದ ಈ ‘ಮಾನವೀಯ ಆಕ್ಷನ್’ ನಿಜಕ್ಕೂ ಹ್ಯಾಟ್ಸ್ ಆಫ್ ಹೇಳುವಂತಿದೆ.





