ಎಲ್ಲೆಡೆ ರಿಯಾಲಿಟಿ ಶೋಗಳ ಹವಾ ಜೋರಾಗಿದೆ. ಕನ್ನಡ, ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಗ್ ಬಾಸ್ ಸಂಚಲನ ಮೂಡಿಸುತ್ತಿದೆ. ಅದರಲ್ಲೂ ಕಿಚ್ಚ ಸುದೀಪ್ ಸಾರಥ್ಯದ ಕನ್ನಡ ಬಿಗ್ ಬಾಸ್ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದರೆ, ಇತ್ತ ತಮಿಳು ಬಿಗ್ ಬಾಸ್ ಸೀಸನ್ 9 ಅನಿರೀಕ್ಷಿತ ತಿರುವುಗಳಿಂದ ಸುದ್ದಿಯಾಗುತ್ತಿದೆ. ಇತ್ತೀಚೆಗೆ ನಿರೂಪಕ ವಿಜಯ್ ಸೇತುಪತಿ ಅವರು ಇಬ್ಬರು ಸ್ಪರ್ಧಿಗಳಿಗೆ ನೇರವಾಗಿ ‘ರೆಡ್ ಕಾರ್ಡ್’ ತೋರಿಸಿ ಮನೆಯಿಂದ ಹೊರಗಟ್ಟಿದ್ದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಏನಿದು ರೆಡ್ ಕಾರ್ಡ್ ಕಿರಿಕ್?
ಯಾವುದೇ ಸ್ಪರ್ಧಿಯು ಬಿಗ್ ಬಾಸ್ ನಿಯಮಗಳನ್ನು ಗಾಳಿಗೆ ತೂರಿ, ಅತಿರೇಕವಾಗಿ ವರ್ತಿಸಿದಾಗ ಅಥವಾ ಸಹ ಸ್ಪರ್ಧಿಗಳ ಮೇಲೆ ದೈಹಿಕ ಹಲ್ಲೆ ಮಾಡಿದಾಗ ಬಿಗ್ ಬಾಸ್ ಮಂಡಳಿ ‘ರೆಡ್ ಕಾರ್ಡ್’ ಎಂಬ ಕಠಿಣ ಅಸ್ತ್ರವನ್ನು ಬಳಸುತ್ತದೆ. ಈ ಬಾರಿ ತಮಿಳು ಬಿಗ್ ಬಾಸ್‌ನಲ್ಲಿ ವಿಜೆ ಪಾರ್ವತಿ ಮತ್ತು ಕಮ್ರುದ್ದೀನ್‌ಗೆ ವಿಜಯ್ ಸೇತಿಪತಿ ರೆಡ್‌ಕಾರ್ಡ್ ತೋರಿಸಿದ್ದಾರೆ. 90 ದಿನಗಳ ಕಾಲ ಮನೆಯಲ್ಲಿದ್ದ ಈ ಇಬ್ಬರೂ ಸ್ಪರ್ಧಿಗಳ ವರ್ತನೆ ಮೊದಲಿನಿಂದಲೂ ವೀಕ್ಷಕರಿಗೆ ಮುಜುಗರ ತರುತ್ತಿತ್ತು. ಆದರೆ ‘ಟಿಕೆಟ್ ಟು ಫಿನಾಲೆ’ ಟಾಸ್ಕ್‌ನಲ್ಲಿ ಇವರಿಬ್ಬರ ವರ್ತನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಟಾಸ್ಕ್‌ನಲ್ಲಿ ನಡೆದಿದ್ದೇನು?
ಫಿನಾಲೆ ತಲುಪಲು ನಡೆದ ‘ಕಾರ್ ಟಾಸ್ಕ್’ ವೇಳೆ ಪಾರ್ವತಿ ಮತ್ತು ಕಮ್ರುದ್ದೀನ್ ಅತ್ಯಂತ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಸಹ ಸ್ಪರ್ಧಿ ಸಾಂಡ್ರಾ ಅವರನ್ನು ಕಾರಿನಿಂದ ಹೊರಹಾಕುವ ಭರದಲ್ಲಿ ಇಬ್ಬರೂ ಸೇರಿ ಅವರನ್ನು ಜೋರಾಗಿ ದೂಡಿದರು. ಇದರಿಂದ ಸಾಂಡ್ರಾ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿತು. ಈ ವೇಳೆ ಗಾಯವಾಗಿದ್ದ ಸಾಂಡ್ರ ಬೇಸರ ವ್ಯಕ್ತಪಡಿಸಿದ್ದರು. ಪಾರ್ವತಿ ಮತ್ತು ಕಮ್ರುದ್ದೀನ್ ಕಿಂಚಿತ್ತೂ ಪಶ್ಚಾತ್ತಾಪ ಪಡಲಿಲ್ಲ. ಸಾಂಡ್ರಾಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದ್ದರೂ ಇವರು ಆಟದ ಬಗ್ಗೆಯೇ ಮಾತನಾಡುತ್ತಿದ್ದುದು ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿತ್ತು.
ವಿಜಯ್ ಸೇತುಪತಿ ಗರಂ!
ವಾರದ ಪಂಚಾಯಿತಿಯಲ್ಲಿ ವೇದಿಕೆಗೆ ಬಂದ ‘ಮಕ್ಕಳ್ ಸೆಲ್ವನ್’ ವಿಜಯ್ ಸೇತುಪತಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದರು. ಇಬ್ಬರ ಅಸಭ್ಯ ಮತ್ತು ಕ್ರೂರ ವರ್ತನೆಯನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ ಅವರು, ಇದು ಆಟವಲ್ಲ, ಇದು ವಿಕೃತಿ ಎಂದು ಗುಡುಗಿದರು. ತಕ್ಷಣವೇ ರೆಡ್ ಕಾರ್ಡ್ ನೀಡುವ ಮೂಲಕ ಇಬ್ಬರನ್ನೂ ಶೋನಿಂದ ಹೊರಹಾಕಿದ್ದಾರೆ.
ರೆಡ್ ಕಾರ್ಡ್ ನೀಡಿದರೆ ಆಗುವ ನಷ್ಟಗಳೇನು?
ರೆಡ್ ಕಾರ್ಡ್ ಎನ್ನುವುದು ಬಿಗ್ ಬಾಸ್ ಮನೆಯಲ್ಲಿ ಸಿಗುವ ಅತ್ಯಂತ ಅವಮಾನಕಾರಿ ಎಲಿಮಿನೇಷನ್. ಯಾವ ಸ್ಪರ್ಧಿ ಮೇಲೆ ರೆಡ್‌ಕಾರ್ಡ್ ಬಳಕೆಯಾಘಿತ್ತದೋ ಆ ಸ್ಪರ್ಧಿಗಳಿಗೆ, ವೋಟಿಂಗ್ ಪ್ರಕ್ರಿಯೆ ಇಲ್ಲದೆಯೇ ಸ್ಪರ್ಧಿಗಳನ್ನು ಮನೆಗೆ ಕಳುಹಿಸಲಾಗುತ್ತದೆ. ನಿಯಮದಂತೆ ಇಲ್ಲಿಯವರೆಗೆ ಅವರು ಗಳಿಸಿದ ಸಂಭಾವನೆ (Remuneration) ಸಿಗುವುದಿಲ್ಲ, ಬದಲಾಗಿ ಕಡಿಮೆಯಾಗಬಹುದು. ಒಮ್ಮೆ ರೆಡ್ ಕಾರ್ಡ್ ಪಡೆದವರು ಭವಿಷ್ಯದಲ್ಲಿ ಮತ್ತೆ ಬಿಗ್ ಬಾಸ್ ಸಂಬಂಧಿತ ಕಾರ್ಯಕ್ರಮಗಳಲ್ಲಿ ಅಥವಾ ವೈಲ್ಡ್ ಕಾರ್ಡ್ ಮೂಲಕ ಮರಳಲು ಅವಕಾಶವಿರುವುದಿಲ್ಲ. ಸಾರ್ವಜನಿಕವಾಗಿ ವ್ಯಕ್ತಿತ್ವಕ್ಕೆ ದೊಡ್ಡ ಮಟ್ಟದ ಧಕ್ಕೆ ಉಂಟಾಗುತ್ತದೆ.
ಒಟ್ಟಿನಲ್ಲಿ, ಬಿಗ್ ಬಾಸ್ ಇತಿಹಾಸದಲ್ಲೇ ಇಬ್ಬರು ಸ್ಪರ್ಧಿಗಳಿಗೆ ಒಟ್ಟಿಗೆ ರೆಡ್ ಕಾರ್ಡ್ ನೀಡಿರುವುದು ದೊಡ್ಡ ಸಂಚಲನ ಮೂಡಿಸಿದೆ. ಇದು ಮುಂದಿನ ಸ್ಪರ್ಧಿಗಳಿಗೆ ಒಂದು ಪಾಠವಾಗಲಿದೆ ಎಂಬುದರಲ್ಲಿ ಸಂಶಯವಿಲ್ಲ.





