ಸಿಂಪಲ್ ಸುನಿ.. ಹೆಸರಿಗಷ್ಟೇ ಇವರು ಸಿಂಪಲ್. ಆದ್ರೆ ನೀವು ನಾವು ಅಂದ್ಕೊಂಡಷ್ಟು ಸರಳ ಜೀವಿ ಅಲ್ಲವೇ ಇಲ್ಲ. ಅವ್ರ ಟ್ರ್ಯಾಕ್ ರೆಕಾರ್ಡ್ ನೋಡಿದ್ರೆ ಗೊತ್ತಾಗುತ್ತೆ ಅವರೆಂಥಾ ಟ್ಯಾಲೆಂಟ್ ಅಂತ. ಅವತಾರ ಪುರುಷ, ಒಂದು ಸರಳ ಪ್ರೇಮಕಥೆ ಬಳಿಕ ಮತ್ತೊಂದು ಗತ ವೈಭವವನ್ನು ನಿಮ್ಮ ಮುಂದೆ ತರ್ತಿದ್ದಾರೆ. ಜೊತೆಗೆ ಶಿಷ್ಯ ಶೀಲಮ್‌ರನ್ನ ಹೀರೋ ಮಾಡಲು ಕೂಡ ಸಜ್ಜಾಗಿದ್ದಾರೆ.
- ಸುನಿ ಡಬಲ್ ಡೋಸ್.. ಇವ್ರು ಅಂದ್ಕೊಂಡಷ್ಟು ಸಿಂಪಲ್ ಅಲ್ಲ
- ಆಶಿಕಾ-ದುಷ್ಯಂತ್ ಗತವೈಭವದಲ್ಲಿ ಕನ್ನಡ ವರ್ಣಮಾಲೆ ವೈಭವ
- ಸುನಿಯಿಂದ ಮೋಡ ಕವಿದ ವಾತಾವರಣಕ್ಕೊಂದು ಅಕ್ಷರಮಾಲೆ
- ಅಸಿಸ್ಟೆಂಟ್ ಡೈರೆಕ್ಟರ್ ಸುನಿ ಶಿಷ್ಯ ಶೀಲಮ್ ಇನ್ಮೇಲೆ ಹೀರೋ..!
ಸಿಂಪಲ್ ಸುನಿ.. ಒಂದೂವರೆ ದಶಕದ ಹಿಂದೆ ರಕ್ಷಿತ್ ಶೆಟ್ಟಿ ಅನ್ನೋ ಪ್ರತಿಭೆಗೆ ಒಂದೊಳ್ಳೆ ವೇದಿಕೆ ಮಾಡಿಕೊಟ್ಟ ಕ್ಯಾಪ್ಟನ್ ಆಫ್ ದಿ ಶಿಪ್. ಹೌದು.. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದಿಂದ ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಜರ್ನಿ ಶುರುವಿಟ್ಟರು. ಅದಾದ ಬಳಿಕ ಅವರು ಮಾಡಿದ ಬಹುತೇಕ ಚಿತ್ರಗಳು ಬ್ಲಾಕ್ ಬಸ್ಟರ್ ಹಿಟ್. ಯೂತ್‌ನ ಗಮನದಲ್ಲಿಟ್ಟುಕೊಂಡು ಬರೆದು, ಅದನ್ನ ತೆರೆಗೆ ತರುವ ಸುನಿ, ಸಿಂಪಲ್ ಕಥೆಗಳಿಂದ ಮಸ್ತ್ ಮನರಂಜನೆ ನೀಡ್ತಾರೆ.
ಆಪರೇಷನ್ ಅಲಮೇಲಮ್ಮ, ಚಮಕ್, ಬಜಾರ್, ಸಖತ್ ಹೀಗೆ ಸಾಕಷ್ಟು ವೆರೈಟಿ ಚಿತ್ರಗಳನ್ನ ಮಾಡಿದ್ರು. ಅವತಾರ ಪುರುಷ ಸುನಿ ಕರಿಯರ್‌ನ ಡಿಫರೆಂಟ್ ಜಾನರ್ ಸಿನಿಮಾ. ಎರಡು ಭಾಗಗಳಲ್ಲಿ ಅವತಾರ ಪುರುಷನನ್ನ ತೆರೆಗೆ ತಂದ ಇವರು, ಒಂದು ಸರಳ ಪ್ರೇಮಕಥೆಯಿಂದ ಮತ್ತೊಮ್ಮೆ ಪ್ರೇಕ್ಷಕರ ಮನ ರಂಜಿಸಿದ್ರು. ಸದ್ಯ ಗತ ವೈಭವ ಅನ್ನೋ ಚಿತ್ರ ಮಾಡ್ತಿದ್ದು, ದುಷ್ಯಂತ್ ಅನ್ನೋ ಹೊಸ ಹೀರೋನ ಹುಟ್ಟಿ ಹಾಕ್ತಿದ್ದಾರೆ. ಅದೂ ಆಶಿಕಾ ರಂಗನಾಥ್ ಅಂತಹ ಸ್ಟಾರ್ ನಟಿಯೊಂದಿಗೆ ಅನ್ನೋದು ಇಂಟರೆಸ್ಟಿಂಗ್.
ಇತ್ತೀಚೆಗೆ ಗತವೈಭವ ಚಿತ್ರದ ಹಾಡೊಂದು ರಿಲೀಸ್ ಆಗಿದ್ದು, ವರ್ಣಮಾಲೆ ಅನ್ನೋ ಈ ಹಾಡು, ಸುನಿಯ ಅಕ್ಷರಮಾಲೆಯಿಂದ ಮತ್ತಷ್ಟು ಹಿತ ಅನಿಸಿದೆ. ಹೌದು.. ಸಂಗೀತದ ಡಾಮಿನೇಷನ್‌ನಿಂದ ಸಾಹಿತ್ಯ ಮರೆಯಾಗ್ತಿರೋ ಈ ಕಾಲಘಟ್ಟದಲ್ಲಿ ಕಿವಿಗೆ ತಾಕಿ, ಮನಸ್ಸಿಗೆ ಹೋಗಿ ಮೈಂಡ್ ಕೂಡ ಯೋಚಿಸುವಂತೆ ಮಾಡುವ ಪದಪುಂಜ ಪೋಣಿಸಿದ್ದಾರೆ ಸಿಂಪಲ್ ಸುನಿ. ಕನ್ನಡದ ಜೊತೆ ತೆಲುಗಿನಲ್ಲೂ ಈ ಗತವೈಭವ ಬರ್ತಿದ್ದು, ಆಶಿಕಾ-ದುಷ್ಯಂತ್ ಸಿನಿಯಾನಕ್ಕೊಂದು ಹಿಟ್ ಕೊಡೋ ಲಕ್ಷಣ ತೋರಿದೆ.
ಇನ್ನು ಸುಮಾರು ಒಂದು ದಶಕದಿಂದ ಸಿಂಪಲ್ ಸುನಿ ಜೊತೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದುಕೊಂಡು, ಅಸೋಸಿಯೇಟ್ ಡೈರೆಕ್ಟರ್ ಆಗಿ ಪಳಗಿರೋ ಶೀಲಮ್ ಅನ್ನೋ ಯುವ ಪ್ರತಿಭೆಯನ್ನ ಹೀರೋ ಮಾಡಲು ಹೊರಟಿದ್ದಾರೆ ಸುನಿ. ಹೌದು.. ತನ್ನದೇ ಗರಡಿಯಲ್ಲಿ ತೆರೆಹಿಂದೆ ಪಳಗಿರೋ ಶೀಲಮ್‌ರನ್ನ ಮೋಡ ಕವಿದ ವಾತಾವರಣ ಚಿತ್ರದ ಮೂಲಕ ತೆರೆಮೇಲೆ ತರ್ತಿದ್ದಾರೆ. ಅಕ್ಷರಶಃ ಹೀರೋ ಮಾಡ್ತಿದ್ದಾರೆ ಡೈರೆಕ್ಟರ್ ಸುನಿ.
ಇಂದು ಸುನಿ ಬರ್ತ್ ಡೇ ವಿಶೇಷ ಮೋಡ ಕವಿತ ವಾತಾವರಣ ಚಿತ್ರದ ಹಾಡೊಂದು ರಿಲೀಸ್ ಆಗಿದ್ದು, ಓಂ ಪ್ರಕಾಶ್ ರಾವ್ ಮಗಳು ಶ್ರಾವ್ಯ ಜೊತೆ ಶೀಲಮ್ ಮಸ್ತ್ ರೊಮ್ಯಾನ್ಸ್ ಮಾಡಿದ್ದಾರೆ. ಇದಕ್ಕೂ ಸಹ ಸುನಿ ಅವರೇ ಸಾಹಿತ್ಯ ಪೋಣಿಸಿದ್ದು, ಎಲ್ಲರೂ ಗುನುಗುವಂತಹ ಹಾಡಾಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್