ಪ್ರತೀ ವರ್ಷದಂತೆ ಈ ವರ್ಷವೂ ದುಬೈನಲ್ಲಿ ಪ್ರತಿಷ್ಠಿತ ಸೈಮಾ ಅವಾರ್ಡ್ ಫಂಕ್ಷನ್ ಅದ್ಧೂರಿಯಾಗಿ ನಡೆದಿದೆ. ಸೌತ್‌ನ ಎಲ್ಲಾ ಸೂಪರ್ ಸ್ಟಾರ್‌ಗಳು ಭಾಗಿಯಾಗಿ, ಕಾರ್ಯಕ್ರಮ ಸಿಕ್ಕಾಪಟ್ಟೆ ರಂಗೇರಿದೆ. ಆ ಕಲರ್‌ಫುಲ್ ವೇದಿಕೆಯಲ್ಲಿ ಕನ್ನಡದ ಉಪೇಂದ್ರ, ದುನಿಯಾ ವಿಜಯ್, ರಶ್ಮಿಕಾ ಸೇರಿದಂತೆ ಸಾಕಷ್ಟು ಮಂದಿ ಅವಾರ್ಡ್ಸ್ ಕೂಡ ಪಡೆದಿದ್ದಾರೆ. ಆದ್ರೆ ಅವರು ನಿಜಕ್ಕೂ ಅವಾರ್ಡ್ ಕೊಟ್ರೋ ಇಲ್ಲ ಅವಮಾನ ಮಾಡಿದ್ರೋ ಅನ್ನೋದೇ ಯಕ್ಷ ಪ್ರಶ್ನೆ.
- ಸೈಮಾದಲ್ಲಿ ಸ್ಯಾಂಡಲ್‌ವುಡ್‌ಗೆ ಅಪಮಾನ.. ಕೆರಳಿದ ಭೀಮ..!
- ದುಬೈನಲ್ಲಿ ಅವಾರ್ಡ್ ಕೊಟ್ರೋ ಇಲ್ಲ ಅವಮಾನ ಮಾಡಿದ್ರೋ?
- ವೇದಿಕೆಯಲ್ಲೇ ಆಯೋಜಕರಿಗೆ ದುನಿಯಾ ವಿಜಯ್ ಕ್ಲಾಸ್
- ಕನ್ನಡ ಅಂದ್ರೆ ಎಲ್ಲರಿಗೂ ಹಗುರ.. ಬುದ್ಧಿ ಕಲಿಸೋದು ಹೇಗೆ..?
ಹೌದು, ಚೆನ್ನೈನಲ್ಲಿ ಕನ್ನಡ ಚಿತ್ರಗಳು ತಯಾರಾಗ್ತಿದ್ದ ದಿನಗಳಿಂದ ಇಲ್ಲಿಯವರೆಗೆ ಚಿತ್ರರಂಗದಲ್ಲಿ ಸಾಕಷ್ಟು ಮಹತ್ವದ ಬದಲಾವಣೆಗಳು ಆಗಿವೆ. 90 ವರ್ಷಗಳ ಇತಿಹಾಸವಿರೋ ನಮ್ಮ ಚಿತ್ರರಂಗದ ಕಲಾವಿದರು ಹಾಗೂ ತಂತ್ರಜ್ಞರು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪನ್ನು ಒತ್ತಿದ್ದಾರೆ. ಅದಕ್ಕಾಗಿ ಸಾಲು ಸಾಲು ರಿವಾರ್ಡ್‌ಗಳು, ಅವರ್ಡ್‌ಗಳು, ಸನ್ಮಾನಗಳೂ ಆಗಿವೆ. ಜೊತೆ ಜೊತೆಗೆ ಅವಮಾನ, ಅಪಮಾನಗಳು ಕೂಡ ಆಗಿವೆ. ಇಂದಿಗೂ ಆಗ್ತಿರೋದು ದುರಂತ.ಹೌದು, 2024ನೇ ಸಾಲಿನ ಸೌತ್ ಇಂಡಿಯನ್ ಮೂವೀಸ್‌ಗೆ ನೀಡುವ ಸೈಮಾ ಅವಾರ್ಡ್ ಫಂಕ್ಷನ್ ಎರಡು ದಿನಗಳಿಂದ ದುಬೈನಲ್ಲಿ ಅದ್ಧೂರಿಯಾಗಿ ನಡೆದಿದೆ. ಪ್ರತೀ ವರ್ಷದಂತೆ ಈ ವರ್ಷವೂ ನಮ್ಮ ಕಲಾವಿದರು ಹಾಗೂ ತಂತ್ರಜ್ಞರು ದುಬೈಗೆ ತೆರಳಿ, ಸೈಮಾ ವೇದಿಕೆಯಲ್ಲಿ ಪ್ರಶಸ್ತಿಗಳನ್ನ ಸ್ವೀಕರಿಸಿದ್ದಾರೆ. ಆದ್ರೆ ಅಲ್ಲಿ ನಿಜಕ್ಕೂ ಅವಾರ್ಡ್ ಕೊಟ್ಟರೋ ಅಥ್ವಾ ಅವಮಾನ ಮಾಡಿದ್ರೋ ಅನ್ನೋದೇ ಪ್ರಶ್ನೆಯಾಗಿ ಕಾಡ್ತಿದೆ.
ಬೆಸ್ಟ್ ಕ್ರಿಟಿಕ್ ಆ್ಯಕ್ಟರ್ ಅವಾರ್ಡ್ ಪಡೆದ ದುನಿಯಾ ವಿಜಯ್, ಅದೇ ವೇದಿಕೆಯಲ್ಲಿ ಸೈಮಾ ಆಯೋಜಕರ ವಿರುದ್ಧ ಕಿಡಿ ಕಾರಿದ್ದಾರೆ. ಮುಂದೆ ಹೀಗೇ ಆದ್ರೆ ನಾವು ಬರಲ್ಲ ಅಂತ ಬಿಸಿ ಮುಟ್ಟಿಸಿದ್ದಾರೆ. ಅದಕ್ಕೆ ಕಾರಣ ಅಲ್ಲಿ ನಡೆಯುವ ಭೇದಭಾವಗಳು, ತಾರತಮ್ಯಗಳು. ಹೌದು, ತೆಲುಗು, ತಮಿಳು ಹಾಗೂ ಮಲಯಾಳಂ ಮಂದಿಗೆ ನೀಡಿದ ಬಳಿಕ ಕೊನೆಯಲ್ಲಿ ಕನ್ನಡ ಚಿತ್ರರಂಗದ ಮಂದಿಗೆ ಅವಾರ್ಡ್‌ಗಳನ್ನ ನೀಡ್ತಾರೆ ಆಯೋಜಕರು. ಅಷ್ಟರಲ್ಲಿ ವೇದಿಕೆ ಮುಂಭಾಗ ಎಲ್ಲರೂ ಖಾಲಿ ಮಾಡಿರ್ತಾರೆ. ಕನ್ನಡವನ್ನು ಕೆಳ ಮಟ್ಟದಲ್ಲಿ ನೋಡುವ ಮನೋಭಾವ ಏಕೆ ಅಂತ ಸ್ಯಾಂಡಲ್‌ವುಡ್ ಭೀಮ ಅಲ್ಲಿಯೇ ತಾಕೀತು ಮಾಡಿದ್ದಾರೆ.
ಯುಐ ಚಿತ್ರದ ನಿರ್ದೇಶನಕ್ಕಾಗಿ ಉಪೇಂದ್ರ ಬೆಸ್ಟ್ ಡೈರೆಕ್ಟರ್ ಪ್ರಶಸ್ತಿ ಸ್ವೀಕರಿಸಿದ್ರು. ಓ2 ಚಿತ್ರದ ನಟನೆಗೆ ಆಶಿಕಾ ರಂಗನಾಥ್, ಮ್ಯೂಸಿಕ್ ವಿಭಾಗದಲ್ಲಿ ಅಜನೀಶ್ ಲೋಕನಾಥ್, ಕೊರಿಯೋಗ್ರಫಿ ವಿಭಾಗದಲ್ಲಿ ಇಮ್ರಾನ್ ಸರ್ದಾರಿಯಾ, ಬೆಸ್ಟ್ ಡೆಬ್ಯೂಟೆಂಟ್‌ನಲ್ಲಿ ಸಮರ್ಜೀತ್ ಲಂಕೇಶ್ ಹಾಗೂ ಅಂಕಿತಾ ಅಮರ್, ಭರವಸೆ ಮೂಡಿಸಿದ ನಟಿ ಕೆಟಗರಿಯಲ್ಲಿ ಸಾನ್ಯಾ ಅಯ್ಯರ್, ಬೆಸ್ಟ್ ಫಿಲ್ಮ್ ವಿಭಾಗದಲ್ಲಿ ಕೃಷ್ಣ ಪ್ರಣಯಸಖಿ ಚಿತ್ರದ ಶ್ರೀನಿವಾಸ್ ರಾಜು ಹೀಗೆ ಸಾಕಷ್ಟು ಮಂದಿ ಪ್ರಶಸ್ತಿಗಳನ್ನ ಸ್ವೀಕರಿಸಿ ಸಂಭ್ರಮಿಸಿದರು. ಅದೇ ವೇದಿಕೆಯಲ್ಲಿ ರಾಕ್‌ಲೈನ್ ವೆಂಕಟೇಶ್, ಸುಮಲತಾ ಅಂತಹ ಹಿರಿಯರು ಕೂಡ ಭಾಗಿ ಆಗಿದ್ದರು.
ನಟ ಸುದೀಪ್‌ರಿಗೆ ಅವಾರ್ಡ್ ಅನೌನ್ಸ್ ಆದಾಗ ಅದನ್ನ ಡಾ. ವಿ ನಾಗೇಂದ್ರ ಪ್ರಸಾದ್ ರಿಸೀವ್ ಮಾಡಿದ್ದಾರೆ. ಆದ್ರೆ ಆಗ ವೇದಿಕೆ ಮುಂದೆ ಯಾರೂ ಇರಲಿಲ್ಲ ಅನ್ನೋದು ವಿಪರ್ಯಾಸ. ಇಷ್ಟಕ್ಕೂ ಸ್ಟೇಟ್ ಅವಾರ್ಡ್‌ನ ರಿಜೆಕ್ಟ್ ಮಾಡಿದಂತಹ ಸುದೀಪ್ ಅವರಿಗೆ ಈ ಸೈಮಾ ಬೇಕಿತ್ತಾ..? ಅವರಿಗೆ ಅದರ ನಿರೀಕ್ಷೆಯೂ ಇಲ್ಲ. ಹಾಗಂತ ಪ್ರಶಸ್ತಿ ಸ್ವೀಕರಿಸಲು ಬಂದೂ ಇಲ್ಲ. ಮಾರ್ಕ್ ಚಿತ್ರದ ಶೂಟಿಂಗ್‌ನಲ್ಲಿ ಚೆನ್ನೈನಲ್ಲಿ ಬ್ಯುಸಿ ಆಗಿದ್ದಾರೆ.
ಇನ್ನೂ ಟಾಲಿವುಡ್‌ನ ಬೆಸ್ಟ್ ಆ್ಯಕ್ಟರ್ ಹಾಗೂ ಆ್ಯಕ್ಟ್ರೆಸ್ ಪ್ರಶಸ್ತಿಗಳನ್ನ ಪುಷ್ಪ-2 ನಟನೆಗಾಗಿ ಅಲ್ಲು ಅರ್ಜುನ್ ಹಾಗೂ ನಮ್ಮ ಕನ್ನಡತಿ ರಶ್ಮಿಕಾ ಮಂದಣ್ಣ ಪಡೆದರು. ಅಲ್ಲದೆ, ಸುಹಾಸಿನಿ ಮಣಿರತ್ನಂ, ಕಮಲ್ ಹಾಸನ್, ಪ್ರಣಿತಾ, ಖಷ್ಬೂ, ಮಾನ್ವಿತಾ, ಅಕುಲ್ ಬಾಲಾಜಿ, ಪ್ರಿಯಾಂಕಾ ಉಪೇಂದ್ರ, ಹಿತಾ ಚಂದ್ರಶೇಖರ್ ಸೇರಿದಂತೆ ಸಾಕಷ್ಟು ಮಂದಿ ಸೈಮಾ ಅವಾರ್ಡ್ ಫಂಕ್ಷನ್‌ನಲ್ಲಿ ಮಿಂಚಿದ್ರು.
ಪರಭಾಷಾ ಸ್ಟಾರ್‌ಗಳಿಗೆ ಸೂಟ್ ರೂಮ್ಸ್ ಜೊತೆ ರಾಜಾತಿಥ್ಯ. ನಮ್ಮವರಿಗೆ ನಾರ್ಮಲ್ ರೂಮ್ಸ್. ಊಟ, ಉಪಚಾರದಿಂದ ಹಿಡಿದು, ಅವಾರ್ಡ್ ನೀಡುವವರೆಗೆ ತಾರತಮ್ಯ ಮಾಡುವ, ಕನ್ನಡಿಗರನ್ನ ತಾತ್ಸಾರದಿಂದ ನೋಡುವ ಇವರುಗಳಿಗೆ ಬುದ್ಧಿ ಕಲಿಸಬೇಕಿರೋದು ಯಾರು..? ಕಳೆದ ವರ್ಷ ಸಂತೋಷಂ ಅವಾರ್ಡ್ಸ್‌ಗೆ ಅಂತ ಗೋವಾಗೆ ಕರೆಸಿ, ಅವಮಾನ ಮಾಡಿ ಕಳಿಸಿದ್ರು. ಈಗ ಸೈಮಾ.
ಇವರುಗಳನ್ನ ಬಾಯ್ಕಾಟ್ ಮಾಡಿ, ಗಟ್ಟಿಯಾಗಿ ಬಿಸಿ ಮುಟ್ಟಿಸದಿದ್ರೆ ಬುದ್ದಿ ಕಲಿಯೋದಿಲ್ಲ ಅನ್ನೋದು ಮಾತ್ರ ಗ್ಯಾರಂಟಿ. ಕಮಲ್ ಹಾಸನ್, ಸೋನು ನಿಗಮ್ ಬಳಿಕ ಮಲಯಾಳಂನ ಲೋಕಾ ಚಿತ್ರತಂಡ. ಹೀಗೆ ಒಂದರ ಹಿಂದೊಂದು ಅಪಮಾನಗಳು ಬೇಕಾ? ಚಿತ್ರರಂಗದ ಹಿರಿಯರು, ಸಂಘ-ಸಂಸ್ಥೆಗಳು ಹಾಗೂ ಸಂಬಂಧ ಪಟ್ಟವರು ಗಮನ ಹರಿಸಿ ಪ್ಲೀಸ್.