ಶಿವಮೊಗ್ಗ: ಇತಿಹಾಸ ಪ್ರಸಿದ್ಧ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಾರಿಕಾಂಬಾ ಜಾತ್ರೋತ್ಸವಕ್ಕೆ ಈ ಬಾರಿ ವಿಶೇಷ ಕಳೆ ತುಂಬಿದ್ದು, ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಸಾಗರದ ಮಾರಿಕಾಂಬೆ ದೇವಿಯ ದರ್ಶನ ಪಡೆದರು. ಜಾತ್ರೆಗೆ ಆಗಮಿಸಿದ ಶಿವಣ್ಣ ದಂಪತಿಗೆ ಸ್ಥಳೀಯ ಜನರಿಂದ ಅದ್ದೂರಿ ಸ್ವಾಗತ ದೊರೆಯಿತು.
ರಾಜ್ಯದ ಎರಡನೇ ಅತಿದೊಡ್ಡ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿರುವ ಸಾಗರದ ಮಾರಿಕಾಂಬಾ ಜಾತ್ರೆ, ಪ್ರತಿವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಈ ಬಾರಿ ಜಾತ್ರೆಗೆ ನಟ ಶಿವರಾಜ್ ಕುಮಾರ್ ಆಗಮಿಸಿದ್ದು, ಚಂಡೆ, ವಾದ್ಯಗಳು ಹಾಗೂ ಪಾರಂಪರಿಕ ನೃತ್ಯಗಳೊಂದಿಗೆ ಶಿವಣ್ಣ ದಂಪತಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಜಾತ್ರೆಗೆ ಆಗಮಿಸಿದ್ದ ಭಕ್ತರು ಶಿವಣ್ಣನನ್ನು ಕಂಡು ಸಂತಸಗೊಂಡು, ಸೆಲ್ಫಿಗಾಗಿ ಮುಗಿಬಿದ್ದರು.
ಮಾರಿಕಾಂಬೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದ ಬಳಿಕ, ಶಿವರಾಜ್ ಕುಮಾರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. “ನನಗೆ ಇಲ್ಲಿಗೆ ಬರೋದು ಯಾವಾಗಲೂ ತುಂಬಾ ಖುಷಿ ಕೊಡುತ್ತದೆ. ಸಾಗರಕ್ಕೆ ಬರೋದೇ ಒಂದು ವಿಶೇಷ ಅನುಭವ. ತಾಯಿ ಮಾರಿಕಾಂಬೆ ಆಗಾಗ ನಮ್ಮನ್ನು ಕರೆಸಿಕೊಳ್ಳುತ್ತಾಳೆ. ಆಕೆ ಕರೆಸಿಕೊಂಡಾಗ ಇಲ್ಲಿಗೆ ಬರುವುದು ನಮ್ಮ ಪುಣ್ಯ ಎಂದು ನಾನು ಭಾವಿಸುತ್ತೇನೆ,” ಎಂದು ಶಿವಣ್ಣ ಭಕ್ತಿಭಾವದಿಂದ ಹೇಳಿದರು.
ನಂತರ ಮಾತನಾಡಿದ ಅವರು, “ಮಾರಿಕಾಂಬೆ ದೇವಿಯ ದರ್ಶನ ಪಡೆದು ಮನಸ್ಸಿಗೆ ತುಂಬಾ ಶಾಂತಿ ಸಿಗುತ್ತದೆ. ದೇವಿಯ ಆಶೀರ್ವಾದ ನಮ್ಮ ಕುಟುಂಬದ ಮೇಲೂ, ರಾಜ್ಯದ ಜನರ ಮೇಲೂ ಸದಾ ಇರಲಿ ಎಂದು ಪ್ರಾರ್ಥಿಸಿದ್ದೇನೆ,” ಎಂದು ತಿಳಿಸಿದರು.
ಈ ವೇಳೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಶಿವಣ್ಣ ದಂಪತಿಗೆ ಸಾಥ್ ನೀಡಿದರು. ಶಾಸಕರೊಂದಿಗೆ ತಮ್ಮ ಆತ್ಮೀಯತೆಯನ್ನು ಹಂಚಿಕೊಂಡ ಶಿವರಾಜ್ ಕುಮಾರ್, “ಬೇಳೂರು ಅವರ ಜೊತೆ ನನಗೆ ವಿಶೇಷ ಆತ್ಮೀಯತೆ ಇದೆ. ಅವರು ಆಗಾಗ ನಮ್ಮನ್ನ ಕರೆಸಿಕೊಳ್ಳುತ್ತಾರೆ. ಇಂತಹ ಪವಿತ್ರ ಸ್ಥಳಕ್ಕೆ ಬರಲು ಅವಕಾಶ ನೀಡಿದ ಅವರಿಗೆ ಧನ್ಯವಾದ,” ಎಂದು ಹೇಳಿದರು.
ಶಿವಣ್ಣ ದಂಪತಿ ಜಾತ್ರಾ ಆವರಣದಲ್ಲಿ ನಡೆದುಕೊಂಡು ಹೋಗುವಾಗ, ಭಕ್ತರು ಕೈಬೀಸಿ ಸ್ವಾಗತಿಸಿದರು. ಕೆಲವರು ಆರತಿ ತೋರಿಸಿ ಆಶೀರ್ವಾದ ಕೋರಿದರೆ, ಇನ್ನೂ ಕೆಲವರು ಫೋಟೋ, ಸೆಲ್ಫಿಗಾಗಿ ಕೋರಿದರು. ಭಕ್ತರ ಪ್ರೀತಿಗೆ ಪ್ರತಿಕ್ರಿಯಿಸಿದ ಶಿವಣ್ಣ ನಗುಮುಖದಿಂದ ಎಲ್ಲರಿಗೂ ಕೈಬೀಸಿದರು.





