ಸ್ಯಾಂಡಲ್‌ವುಡ್‌ನ ಲಿವಿಂಗ್ ಲೆಜೆಂಡ್ ಡಾ. ಶಿವರಾಜ್‌ಕುಮಾರ್ ಈಗ ಒರಿಜಿನಲ್ ಮಾನ್‌ಸ್ಟರ್. ಅವ್ರಿಗೆ ಪ್ಯಾನ್ ಇಂಡಿಯಾ ಸ್ಟಾರ್‌ಗಳು ಕೂಡ ಸಾಥ್ ನೀಡ್ತಿದ್ದು, ಬಾಲಿವುಡ್ ಅಂಗಳದಲ್ಲಿ ಅದಕ್ಕೆ ಒಂಕಾರ ಹಾಡಿದ್ದಾರೆ ಡೈರೆಕ್ಟರ್ ಆರ್ ಚಂದ್ರು. ತಮ್ಮ ಸಿನಿಮಾ ಇನ್ನಿಂಗ್ಸ್‌ನ ರೀ-ಡಿಫೈನ್ ಮಾಡೋಕೆ ಹೊರಟಿರೋ ಚಂದ್ರುಗೆ ಬಿಟೌನ್ ದಾದಾ ಆನಂದ್ ಪಂಡಿತ್ ಕೈ ಜೋಡಿಸಿರೋದು ಹೈಲೈಟ್.
- ಬಿಟೌನ್‌ಗೆ ಒರಿಜಿನಲ್ ಮಾನ್‌ಸ್ಟರ್ ದೊಡ್ಮನೆ ದೊರೆ ಶಿವಣ್ಣ
- ಬಾಲಿವುಡ್‌ಗೆ R. ಚಂದ್ರು ಎಂಟ್ರಿ.. ಆನಂದ್ ಪಂಡಿತ್ ಸಾಥ್
- ಮುಂಬೈನಲ್ಲಿ ಟೈಟಲ್ ಲಾಂಚ್ ಇವೆಂಟ್.. ಗ್ಯಾರಂಟಿಯಲ್ಲಿ ಹೈಲೈಟ್ಸ್
- ಮತ್ತೊಂದು ಗ್ಯಾಂಗ್‌ಸ್ಟರ್ ಮೂವಿಗೆ ಶಿವಣ್ಣ-ಚಂದ್ರು ‘OM’ಕಾರ
ನಮ್ಮ ದೊಡ್ಮನೆ ದೊರೆ.. ಸ್ಯಾಂಡಲ್‌ವುಡ್ ಕಿಂಗ್.. ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ನಟನೆಯ ಚೊಚ್ಚಲ ಬಾಲಿವುಡ್ ಸಿನಿಮಾಗೆ ಟೈಟಲ್ ಫೈನಲ್ ಆಗಿದೆ. ಒರಿಜಿನಲ್ ಮಾನ್‌ಸ್ಟರ್ ಅಂದ್ರೆ OM ಅಂತ ಶೀರ್ಷಿಕೆ ಇಡೋ ಮೂಲಕ ಮತ್ತೊಂದು ಗ್ಯಾಂಗ್‌ಸ್ಟರ್ ಮೂವಿಗೆ ಓಂಕಾರ ಹಾಡಿದ್ದಾರೆ ಸ್ಟೈಲಿಶ್ ಡೈರೆಕ್ಟರ್ ಆರ್ ಚಂದ್ರು. ಇಂಟರೆಸ್ಟಿಂಗ್ ಅಂದ್ರೆ ಇದು ಶಿವಣ್ಣನ ಬಾಲಿವುಡ್ ಸಿನಿಮಾನೂ ಹೌದು.. ಆರ್ ಚಂದ್ರು ಮೊದಲ ಬಾಲಿವುಡ್ ಎಕ್ಸ್‌ಪೆರಿಮೆಂಟ್ ಕೂಡ ಹೌದು.
ತೆಲುಗಿನ ಸುನಿಲ್ ಸೇರಿದಂತೆ ಸಾಕಷ್ಟು ಮಂದಿ ಪರಭಾಷಾ ಸೂಪರ್ ಸ್ಟಾರ್ಸ್ ಈ ಸಿನಿಮಾದ ತಾರಾಗಣದಲ್ಲಿ ಇರಲಿದ್ದು, ಮುಂಬೈನಲ್ಲಿ ನಡೆದ ಗ್ರ್ಯಾಂಡ್ ಟೈಟಲ್ ಹಾಗೂ ಮೋಷನ್ ಪೋಸ್ಟರ್ ಲಾಂಚ್ ಇವೆಂಟ್ ರಂಗೇರಿತ್ತು. ವಿನೂತನ ಪ್ರಯತ್ನಗಳಿಂದ ಹೆಸರಾಗಿರುವ ಕನ್ನಡದ ಸ್ಟಾರ್ ನಿರ್ದೇಶಕ ಹಾಗೂ ನಿರ್ಮಾಪಕ ಆರ್ ಚಂದ್ರು ಈಗ ಬಾಲಿವುಡ್‌ಗೆ ಡೈರೆಕ್ಟರ್ ಆ್ಯಂಡ್ ಪ್ರೊಡ್ಯೂಸರ್ ಆಗಿ ಅಡಿಯಿಟ್ಟಿದ್ದಾರೆ. ಬಿಟೌನ್ ಪಾಲಿಗೆ ದಾದಾ ಅಂತಲೇ ಕರೆಸಿಕೊಳ್ಳುವ ಆನಂದ್ ಪಂಡಿತ್ ಕೂಡ ಚಂದ್ರು ಓಂ ಕನಸಿಗೆ ಸಾಥ್ ನೀಡಿದ್ದಾರೆ. ಹಿಂದಿ, ತಮಿಳು ಹಾಗೂ ಮಲಯಾಳಂ ಇಂಡಸ್ಟ್ರಿಯಿಂದಲೂ ಸಹ ಸ್ಟಾರ್ ನಟರು ಎಂಟ್ರಿ ಕೊಡಲಿದ್ದು, ಅದನ್ನ ಸರ್‌ಪ್ರೈಸ್ ಆಗಿ ಉಳಿಸಿದ್ದಾರೆ ಡೈರೆಕ್ಟರ್ ಚಂದ್ರು.
ಆರ್ ಚಂದ್ರು ಎರಡೂವರೆ ವರ್ಷಗಳ ಹಿಂದೆ ನೂರಾರು ಕೋಟಿ ವೆಚ್ಚದಲ್ಲಿ ಆನಂದ್ ಪಂಡಿತ್ ಜೊತೆ ಕಬ್ಜ ಅನ್ನೋ ಪ್ಯಾನ್ ಇಂಡಿಯಾ ಚಿತ್ರ ನಿರ್ಮಾಣ ಮಾಡಿದ್ರು. ಆ ಚಿತ್ರ ಚಂದ್ರು ಅವರಿಗೆ ಹೆಸರು ಹಾಗೂ ಹಣ ಎರಡನ್ನು ತಂದುಕೊಟ್ಟಿತು. ಅದಲ್ಲದೆ ಪ್ರಪಂಚದಾದ್ಯಂತ ಈ ಚಿತ್ರ ಸುದ್ದಿ ಮಾಡಿತ್ತು. ಈ ಚಿತ್ರದ ನಂತರ ಆರ್ ಚಂದ್ರು ಏನು ಮಾಡುತ್ತಿದ್ದಾರೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಇತ್ತು. ಸಿನಿಮಾವನ್ನೇ ಉಸಿರಾಗಿಸಿಕೊಂಡಿರುವ ಚಂದ್ರು, ಕಬ್ಜ ನಂತ್ರ ಈ ಒರಿಜಿನಲ್ ಮಾನ್‌ಸ್ಟರ್ ಚಿತ್ರ ಕೈಗೆತ್ತಿಕೊಂಡಿದ್ದಾರೆ.
ಬಾಲಿವುಡ್ ಅಂಗಳದಲ್ಲಿ ಸೆವೆನ್ ಸ್ಟಾರ್ ಹೋಟೆಲ್‌ನಲ್ಲಿ ಈ ಸಿನಿಮಾಗೆ ಚಾಲನೆ ನೀಡಲಾಗಿದ್ದು, ಎಷ್ಟು ಬಿಗ್ ಸ್ಕೇಲ್‌ನಲ್ಲಿ ಈ ಸಿನಿಮಾನ ಕಟ್ಟಿಕೊಡ್ತಾರೆ ಅಂತ ನೀವೇ ಊಹಿಸಿಕೊಳ್ಳಿ. ಅಂದಹಾಗೆ ಒರಿಜಿನಲ್ ಮಾನ್‌ಸ್ಟರ್ ಓಂ ಅಂದ್ರೆ ಶಿವಣ್ಣನ ಐಕಾನಿಕ್ ಮೂವಿ ಓಂ ಚಿತ್ರ ನೆನಪಾಗದೇ ಇರದು. ಅದೂ ಕೂಡ ಕಲ್ಟ್ ಕ್ಲಾಸಿಕ್ ಅನಿಸಿತ್ತು. ಇದು ಕೂಡ ಅಂಥದ್ದೇ ಕಲ್ಟ್ ಚಿತ್ರವಾಗಿ ಹೊರಹೊಮ್ಮುತ್ತಾ ಅನ್ನೋದನ್ನ ಕಾದು ನೋಡಬೇಕಿದೆ. ಯಶ್, ರಿಷಬ್ ಶೆಟ್ಟಿ, ಪ್ರಶಾಂತ್ ನೀಲ್ ಹಾಗೂ ಆರ್ ಚಂದ್ರು ಅಂತಹ ಕನ್ನಡಿಗರು ಪ್ರಸ್ತುತ ಕನ್ನಡದ ಸಿನಿಮಾಗಳನ್ನು ಇಡೀ ವಿಶ್ವವೇ ತಿರುಗಿ ನೋಡುವ ಹಾಗೆ ಮಾಡುತ್ತಿದ್ದು, ಇದು ನಿಜಕ್ಕೂ ಪ್ರತಿಯೊಬ್ಬ ಕನ್ನಡಿಗ ಹೆಮ್ಮೆ ಪಡುವ ವಿಷಯವಾಗಿದೆ.
ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿರಲಿದ್ದು, ಮೋಷನ್ ಪೋಸ್ಟರ್ ನಲ್ಲಿ ಸಾಕಷ್ಟು ಎಲಿಮೆಂಟ್ಸ್ ರಿವೀಲ್ ಆಗಿವೆ. ಟೆಂಪಲ್, ಟ್ರೈನ್, ಬೈಕ್, ಮಚ್ಚು, ಹಣ, ಹಳ್ಳಿಯ ಬೀದಿಗಳು, ಕಮಾನು.. ಹೀಗೆ ಸಾಕಷ್ಟು ವಿಷಯಗಳು ಚಿತ್ರದ ಕಥೆಯ ಮೇಲಿನ ಕ್ಯೂರಿಯಾಸಿಟಿ ಹೆಚ್ಚಿಸಿವೆ. ಎ ಜೆ ಶೆಟ್ಟಿ ಕ್ಯಾಮೆರಾ ಕೈಚಳಕ ಇರಲಿದ್ದು, ನಾಯಕಿ ಯಾರಾಗ್ತಾರೆ ಅನ್ನೋದನ್ನ ನಿರೀಕ್ಷಿಸಬೇಕಿದೆ. ಅಂದಹಾಗೆ ಮುಂಬೈ ಇವೆಂಟ್‌ನಲ್ಲಿ ಅಜನೀಶ್, ಗೀತಾ ಶಿವರಾಜ್‌ಕುಮಾರ್, ಸುನಿಲ್ ಸೇರಿದಂತೆ ತಂಡದ ಸಾಕಷ್ಟು ಮಂದಿ ಉಪಸ್ಥಿತರಿದ್ದರು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





