ಹೈದರಾಬಾದ್: ಈ ಸೀಸನ್ ಮಹಿಳಾ ಪ್ರಧಾನ ಸಿನಿಮಾಗಳದ್ದೇ ಹವಾ!.. ದಕ್ಷಿಣ ಭಾರತದ ಚಿತ್ರರಂಗದ ಸ್ಟಾರ್ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರ ಇತ್ತೀಚಿನ ತೆಲುಗು ಚಿತ್ರ ‘ಮಾ ಇಂಟಿ ಬಂಗಾರಂ’ (Maa Inti Bangaram) ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂಪಾಯಿ ಗಳಿಕೆಯ ಗಡಿ ದಾಟಿದೆ. ಈ ಯಶಸ್ಸನ್ನು ನಿರ್ಮಾಪಕ ರಾಜ್ ನಿಡಿಮೋರು (Raj Nidimoru) ಸಮಂತಾಗೆ ತಿಳಿಸಿದಾಗ ಅವರು ಮಾಡಿದ ಮುದ್ದಾದ ರಿಯಾಕ್ಷನ್ (Cute Reaction) ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜೂನ್ 19, 2026 ರಂದು ಬಿಡುಗಡೆಯಾದ ಈ ಮಹಿಳಾ ಪ್ರಧಾನ ತೆಲುಗು ಸಿನಿಮಾ, ಕೇವಲ ಒಂದು ತಿಂಗಳೊಳಗೆ ಈ ದೊಡ್ಡ ಮೈಲಿಗಲ್ಲನ್ನು ತಲುಪಿದೆ. ದಕ್ಷಿಣ ಭಾರತದಲ್ಲಿ ಮಹಿಳಾ ಪ್ರಧಾನ ಸಿನಿಮಾವೊಂದು ಇಷ್ಟು ದೊಡ್ಡ ಯಶಸ್ಸು ಕಂಡಿರುವುದು ಐತಿಹಾಸಿಕವೆಂದೇ ಬಣ್ಣಿಸಲಾಗುತ್ತಿದೆ.
ವೈರಲ್ ಆದ ಸಮಂತಾ ಅವರ ಕ್ಯೂಟ್ ರಿಯಾಕ್ಷನ್:
ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ನಿರ್ಮಾಪಕ ರಾಜ್ ನಿಡಿಮೋರು ಸಮಂತಾಗೆ ಒಂದು ಐಪ್ಯಾಡ್ (iPad) ನೀಡುತ್ತಾರೆ. ಅದನ್ನು ಅನ್ಲಾಕ್ ಮಾಡಿ ನೋಡಿದ ಸಮಂತಾ, ಅದರಲ್ಲಿ ವಿಶ್ವಾದ್ಯಂತ ಸಿನಿಮಾ ಮಾಡಿದ ಕಲೆಕ್ಷನ್ ಅಂಕಿಅಂಶಗಳನ್ನು ನೋಡಿ ದಂಗಾಗಿ ಬಾಯಿ ತೆರೆದುಬಿಡುತ್ತಾರೆ. “ನಾವು 100 ಕೋಟಿ ಮಾಡಿದ್ವಿ!” ಎಂದು ಸಮಂತಾ ಖುಷಿಯಿಂದ ಕೂಗುತ್ತಾರೆ. ಅವರ ಈ ಮುಗ್ಧ ಮತ್ತು ಕ್ಯೂಟ್ ರಿಯಾಕ್ಷನ್ ನೋಡಿ ಅಭಿಮಾನಿಗಳೆಲ್ಲಾ ಫಿದಾ ಆಗಿದ್ದಾರೆ. ಈ ವಿಡಿಯೋವನ್ನು ಸಮಂತಾ ಸ್ವತಃ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದು ಈಗ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ.
ಸಿನಿಮಾಗೂ ಮುನ್ನ ಇದ್ದ ಸವಾಲುಗಳು
ತಮ್ಮ ಸಿನಿಮಾ ರಿಲೀಸ್‌ಗೂ ಮುನ್ನ ತಮ್ಮ ಮನಸ್ಸಿನಲ್ಲಿದ್ದ ಚಿಂತೆಯನ್ನು ಸಮಂತಾ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. “ಮಾ ಇಂಟಿ ಬಂಗಾರಂ ರಿಲೀಸ್‌ಗೂ ಮುನ್ನ, ನನಗೆ ಒಂದೇ ಚಿಂತೆ ಕಾಡುತ್ತಿತ್ತು.. ಜನ ನಮ್ಮ ಸಿನಿಮಾ ಬಗ್ಗೆ ಮಾತಾಡ್ತಿದ್ದಾರಾ? ಪೋಸ್ಟರ್, ಟೀಸರ್ ಜನರನ್ನು ತಲುಪುತ್ತಿದೆಯಾ? ಈ ಸಿನಿಮಾ ಇದೆ ಅಂತ ಅವರಿಗೆ ಗೊತ್ತಾ?” ಎಂದು ಅವರು ಹೇಳಿದ್ದಾರೆ.
ಇನ್ನೂ ತಮ್ಮ ಸ್ನೇಹಿತರೊಬ್ಬರು ಬಿ-ಸೆಂಟರ್ನ (B-Center) ಚಿತ್ರಮಂದಿರದ ಮಾಲೀಕರಿಗೆ ಫೋನ್ ಮಾಡಿ ಸಿನಿಮಾದ ಬಗ್ಗೆ ಕೇಳಿದಾಗ, “ಯಾರಾದ್ರೂ ಹೀರೋಯಿನ್ ಸಿನಿಮಾ ಯಾಕೆ ನೋಡ್ತಾರೆ? ದೊಡ್ಡ ಹೀರೋ ಸಿನಿಮಾದಲ್ಲಿದ್ರೆ ಸರಿ. ಜನ ಅವಳನ್ನ ಗ್ಲಾಮರ್‌ಗೆ ನೋಡ್ತಾರೆ. ಆದ್ರೆ ಹೀರೋಯಿನ್ ಒಬ್ಬಳೇ ಇರೋ ಸಿನಿಮಾ ಯಾರು ನೋಡ್ತಾರೆ? ಯಾರೂ ಬರಲ್ಲ” ಎಂದು ಆ ಮಾಲೀಕರು ನಿರ್ದಾಕ್ಷಿಣ್ಯವಾಗಿ ಹೇಳಿದ್ದರು. ಆದರೆ, ‘ಮಾ ಇಂಟಿ ಬಂಗಾರಂ’ ಈ ಎಲ್ಲಾ ಊಹಾಪೋಹಗಳನ್ನು ಸುಳ್ಳಾಗಿಸಿದೆ.
ಸಮಂತಾ ಅವರು ಈ ಅನುಭವವನ್ನು ಹಂಚಿಕೊಳ್ಳುತ್ತಾ, “ಯಾರಾದ್ರೂ ರಿಸ್ಕ್ ತಗೊಂಡಾಗ ಮಾತ್ರ ನಿಜವಾದ ಬದಲಾವಣೆ ಆಗುತ್ತೆ. ಹೆಚ್ಚಿನ ಸಮಯದಲ್ಲಿ ಆ ರಿಸ್ಕ್ ಗಳು ಫಲ ನೀಡುವುದಿಲ್ಲ. ಆದ್ರೆ, ಕೆಲವೊಮ್ಮೆ ಫಲ ಕೊಡುತ್ತವೆ. ನಮಗೆ ಈ ಬಾರಿ ಅದು ಫಲ ಕೊಟ್ಟಿದೆ. ಇದು ಇನ್ನಷ್ಟು ದೊಡ್ಡ ಬದಲಾವಣೆಯ ಆರಂಭ ಎಂದು ನಾನು ಭಾವಿಸುತ್ತೇನೆ” ಎಂದು ತಿಳಿಸಿದ್ದಾರೆ.
ಮುಂದಿನ ಬಾರಿ ಯಾರಾದ್ರೂ ಬಿ ಅಥವಾ ಸಿ ಸೆಂಟರ್ನ (B or C Center) ಚಿತ್ರಮಂದಿರದವರಿಗೆ ಫೋನ್ ಮಾಡಿ ಮಹಿಳಾ ಪ್ರಧಾನ ಸಿನಿಮಾ ಬಗ್ಗೆ ಕೇಳಿದಾಗ, ತಕ್ಷಣ ‘ಇಲ್ಲ’ ಅನ್ನೋ ಉತ್ತರ ಬರದಿರಲಿ. ‘ನೋಡೋಣ‘ ಅನ್ನೋ ಉತ್ತರವಾದರೂ ಬರಲಿ ಎಂದು ಸಮಂತಾ ಭರವಸೆ ವ್ಯಕ್ತಪಡಿಸಿದ್ದಾರೆ. “ಯಾಕಂದ್ರೆ, ನಿಜ ಹೇಳಬೇಕೆಂದರೆ, ನಮಗೆ ಯಾವತ್ತೂ ನಿಜವಾಗಿಯೂ ಗೊತ್ತಾಗಲ್ಲ” ಎಂದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.





