ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ತಮ್ಮ ತಾಯಿ ಸುಮನ್ ಮಂದಣ್ಣ ಅವರ ಖಾಸಗಿ ಸಂಭಾಷಣೆಯನ್ನು ಅಕ್ರಮವಾಗಿ ಹರಿಬಿಟ್ಟಿರುವ ಕಿಡಿಗೇಡಿಗಳ ವಿರುದ್ಧ 24 ಗಂಟೆಗಳ ಕಾಲಾವಕಾಶ ನೀಡಿ, ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಏನಿದು ಆಡಿಯೋ ವಿವಾದ ?
ಕಳೆದ ಕೆಲವು ದಿನಗಳಿಂದ ರಶ್ಮಿಕಾ ತಾಯಿ ಸುಮನ್ ಮಂದಣ್ಣ ಅವರದ್ದು ಎನ್ನಲಾದ ಆಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಇದು ಎಂಟು ವರ್ಷಗಳ ಹಿಂದಿನ ಹಳೆಯ ಮತ್ತು ಅತ್ಯಂತ ವೈಯಕ್ತಿಕ ಸಂಭಾಷಣೆಯಾಗಿದ್ದು, ಅದನ್ನು ಸಂಬಂಧಪಟ್ಟವರ ಅನುಮತಿಯಿಲ್ಲದೆ ರೆಕಾರ್ಡ್ ಮಾಡಲಾಗಿತ್ತು. ಆ ಸಂಭಾಷಣೆಯ ಒಂದು ಸಣ್ಣ ಭಾಗವನ್ನು ಕತ್ತರಿಸಿ, ಸಂದರ್ಭಕ್ಕೆ ತಕ್ಕಂತೆ ಬಳಸದೆ ವಿವಾದ ಸೃಷ್ಟಿಸುವ ಉದ್ದೇಶದಿಂದ ವೈರಲ್ ಮಾಡಲಾಗಿದೆ ಎಂದು ರಶ್ಮಿಕಾ ಆರೋಪ ಮಾಡಿದ್ದಾರೆ.
— Rashmika Mandanna (@iamRashmika) March 12, 2026
ತಮ್ಮ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಸಂಚಿನ ಬಗ್ಗೆ ಎಕ್ಸ್ (ಟ್ವಿಟರ್) ನಲ್ಲಿ ಸುದೀರ್ಘ ಪತ್ರ ಹಂಚಿಕೊಂಡಿರುವ ರಶ್ಮಿಕಾ, ಕಳೆದ ಎಂಟು ವರ್ಷಗಳಿಂದ ನನ್ನ ಪಯಣದಲ್ಲಿ ಅನೇಕ ಸುಳ್ಳು ಮಾಹಿತಿ, ಕಿರುಕುಳ ಮತ್ತು ಗುರಿಪಡಿಸಿದ ದಾಳಿಗಳನ್ನು ಎದುರಿಸುತ್ತಲೇ ಬಂದಿದ್ದೇನೆ. ಕೇವಲ ವ್ಯೂವ್ಸ್ ಮತ್ತು ಎಂಗೇಜ್‌ಮೆಂಟ್‌ಗಾಗಿ ನನ್ನ ಮಾತುಗಳನ್ನು ತಿರುಚುವುದು ಅಥವಾ ನಾನು ಆಡದ ಮಾತುಗಳನ್ನು ಸುಳ್ಳು ಕಥೆಗಳನ್ನಾಗಿ ಸೃಷ್ಟಿಸುವುದನ್ನು ನಾನು ಗಮನಿಸಿದ್ದೇನೆ. ಸಾರ್ವಜನಿಕ ಜೀವನದಲ್ಲಿ ಇವೆಲ್ಲವೂ ಸಾಮಾನ್ಯ ಎಂದು ಇಷ್ಟು ದಿನ ಮೌನವಾಗಿದ್ದೆ. ಆದರೆ ಈಗ ಆ ಮೌನಕ್ಕೆ ಬ್ರೇಕ್ ಹಾಕುವ ಸಮಯ ಬಂದಿದೆ ಎಂದು ಗುಡುಗಿದ್ದಾರೆ.
ಇದು ಖಾಸಗಿತನದ ಗಂಭೀರ ಉಲ್ಲಂಘನೆ
ಜನರು ಇಷ್ಟು ಕೆಳಮಟ್ಟಕ್ಕೆ ಇಳಿಯಬಲ್ಲರೇ ? ಎಂಟು ವರ್ಷಗಳ ನಂತರ ಈ ವಿಷಯವನ್ನು ಈಗ ಹರಿಬಿಟ್ಟಿರುವುದು ನನ್ನ ಘನತೆ ಮತ್ತು ನೆಮ್ಮದಿಗೆ ಭಂಗ ತರುವ ಸಂಚು. ಇತರರನ್ನು ಇದರಲ್ಲಿ ಎಳೆದು ತರುತ್ತಿರುವುದರಿಂದ ನಾನು ಇನ್ನು ಮುಂದೆ ಸುಮ್ಮನಿರಲು ಸಾಧ್ಯವಿಲ್ಲ. ನಾನು ಈಗ ಒಂದು ಗಡಿ ರೇಖೆ (Border) ಹಾಕುತ್ತಿದ್ದೇನೆ ಎಂದು ಖಡಕ್ ಆಗಿ ಹೇಳಿದ್ದಾರೆ.
ತಪ್ಪು ಮಾಹಿತಿ ಹರಡುತ್ತಿರುವ ಇನ್‌ಫ್ಲುಯೆನ್ಸರ್‌ಗಳು, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆರಶ್ಮಿಕಾ ಅಂತಿಮ ಎಚ್ಚರಿಕೆ ನೀಡಿದ್ದು, ಇದಕ್ಕೆ ಸಂಬಂಧಿಸಿಂದ ಲೇಖನ/ವಿಡಿಯೋಗಳನ್ನು ಹಂಚಿಕೊಂಡಿರುವವರು ತಕ್ಷಣವೇ ಅವುಗಳನ್ನು ಡಿಲೀಟ್ ಮಾಡಬೇಕು. ಹೇಳಿಕೆ ನೀಡಿದ 24 ಗಂಟೆಗಳ ಒಳಗಾಗಿ ಪೋಸ್ಟ್‌ಗಳನ್ನು ತೆಗೆದುಹಾಕದಿದ್ದರೆ, ಅಂತಹವರ ವಿರುದ್ಧ ಮಾನಹಾನಿ ಮತ್ತು ಖಾಸಗಿತನದ ಉಲ್ಲಂಘನೆ ಕಾಯ್ದೆಯಡಿ ಕಾನೂನು ನೋಟಿಸ್ ನೀಡಲಾಗುವುದು ಎಂದು ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ನನ್ನ ಜೀವನ ಹೇಗಿರಬೇಕು ಎಂದು ಬೇರೆಯವರು ನಿರ್ಧರಿಸಲು ಸಾಧ್ಯವಿಲ್ಲ. ನನ್ನ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳುತ್ತೇನೆ ಎನ್ನುವ ಮೂಲಕ ತಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನು ಪ್ರಶ್ನಿಸುವವರಿಗೆ ರಶ್ಮಿಕಾ ತಕ್ಕ ಉತ್ತರ ನೀಡಿದ್ದಾರೆ.





