ಇತ್ತೀಚೆಗೆ ನಮ್ಮ ಬೆಂಗಳೂರು ಹೆಣ್ಣು ಮಕ್ಕಳಿಗೆ ಆಕ್ಷೇಪಾರ್ಹ ಪದ ಬಳಸಿ, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು ಮಲಯಾಳಂನ ಲೋಕಾ ಚಿತ್ರತಂಡ. ಆದ್ರೀಗ ಅವಮಾನಿಸಿದವರನ್ನೇ ಹೊಗಳುವ ಮೂಲಕ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ. ಈ ಕುರಿತ ಇನ್‌ಸೈಡ್ ಸ್ಟೋರಿ ಇಲ್ಲಿದೆ.
ರಶ್ಮಿಕಾ ಮಂದಣ್ಣ ನಮ್ಮದೇ ಕರ್ನಾಟಕದ ಕೂರ್ಗ್ ಮೂಲದ ಪ್ರತಿಭಾವಂತ ನಟಿ. ಆಕೆಗೆ ಅಂದ ಹಾಗೂ ಅದೃಷ್ಟ ಎರಡೂ ಕೈ ಹಿಡಿದ ಹಿನ್ನೆಲೆ ಸದ್ಯ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿಮಣಿಯಾಗಿ ಮಿಂಚುತ್ತಿದ್ದಾರೆ. ಅದ್ರಲ್ಲೂ ಸೌತ್ ಸಿನಿದುನಿಯಾದಿಂದ ಬಾಲಿವುಡ್‌ವರೆಗೆ ಎಲ್ಲಾ ಸೂಪರ್ ಸ್ಟಾರ್‌ಗಳಿಗೆ ಈಕೆಯೇ ಅಚ್ಚುಮೆಚ್ಚು. ಈಕೆ ಸಿನಿಮಾದಲ್ಲಿ ಇದ್ರೆ ಆ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗೋದ್ರಲ್ಲಿ ಡೌಟೇ ಇಲ್ಲ.
ಕನ್ನಡಿಗರಿಗೆ ಅವಮಾನ ಮಾಡಿದವ್ರನ್ನೇ ಕೊಂಡಾಡಿದ ರಶ್ಮಿಕಾ
ಕಲ್ಯಾಣಿ ಪ್ರಿಯದರ್ಶನ್ & ಲೋಕಾ ಟೀಂನ ಪ್ರಶಂಸಿಸಿದ ನಟಿ
ಅನಿಮಲ್, ಪುಷ್ಪ-2, ಛಾವಾ ಹಾಗೂ ಕುಬೇರ ಚಿತ್ರಗಳ ಸಕ್ಸಸ್, ರಶ್ಮಿಕಾನ ಮತ್ತಷ್ಟು ಉತ್ತುಂಗಕ್ಕೇರುವಂತೆ ಮಾಡಿವೆ. ಆದ್ರೆ ರಶ್ಮಿಕಾ ಆಗಾಗ ಮಾಡಿಕೊಳ್ಳೋ ಎಡವಟ್‌ಗಳು ನಿಜಕ್ಕೂ ದೊಡ್ಡ ಮಟ್ಟಕ್ಕೆ ಇರುತ್ತವೆ. ಈಕೆಗೆ ಕರ್ನಾಟಕ, ಕನ್ನಡ ಭಾಷೆ ಮೇಲೆ ಅಷ್ಟಾಗಿ ಗೌರವ ಆಗಲಿ, ಅಭಿಮಾನ ಆಗಲಿ ಇಲ್ಲ ಅನ್ನೋದು ಕೆಲವರ ವಾದ. ಅಲ್ಲಲ್ಲಿ ಆಕೆ ಪರಭಾಷೆಗಳನ್ನ ಹೆಮ್ಮೆಯಿಂದ ಮಾತಾಡೋದು, ಅರಕಲು ಮುರಕಲು ಕನ್ನಡ ಮಾತಾಡೋದನ್ನ ಕಂಡು ಅದೆಷ್ಟೋ ಮಂದಿ ಕೆಟ್ಟ ಕೆಟ್ಟದಾಗಿ ಬೈದಿದ್ದುಂಟು. ಸೋಶಿಯಲ್ ಮೀಡಿಯಾದಲ್ಲಿ ಟ್ರಾಲ್ ಆಗಿದ್ದೂ ಹೌದು.
ಆದ್ರೀಗ ಮತ್ತೊಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ಅದೇನಪ್ಪಾ ಅಂದ್ರೆ, ಇತ್ತೀಚೆಗೆ ರಿಲೀಸ್ ಆದ ಮಲಯಾಳಂನ ಲೋಕಾ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 200ಕೋಟಿಗೂ ಅಧಿಕ ಮೊತ್ತ ಕಲೆ ಹಾಕಿ, ಎಲ್ಲರ ಮನಸ್ಸು ಗೆದ್ದಿದೆ. ಅದ್ರಲ್ಲೂ ಕಲ್ಯಾಣಿ ಪ್ರಿಯದರ್ಶನ್ ಸೂಪರ್ ಹೀರೋ ಆಗಿ ಅದ್ಭುತ ಅಭಿನಯ ನೀಡಿದ್ದಾರೆ ಎನ್ನಲಾಗ್ತಿದೆ. ಇದೀಗ ಆ ಕಲ್ಯಾಣಿ ಹಾಗೂ ಇಡೀ ಚಿತ್ರತಂಡಕ್ಕೆ ಶುಭ ಕೋರಿ ಸೋಶಿಯಲ್ ಮೀಡಿಯಾದಲ್ಲೊಂದು ಪೋಸ್ಟ್ ಹಾಕಿದ್ದಾರೆ ರಶ್ಮಿಕಾ.
ಒಂದು ಸಿನಿಮಾ ಚೆನ್ನಾಗಿದೆ ಅಂದಾಗ ಅದರ ಬಗ್ಗೆ ಹೊಗಳೋದ್ರಲ್ಲಿ ತಪ್ಪೇನಿದೆ ಅಂತ ಕೆಲವರು ಅಂತಿದ್ದಾರೆ. ಆದ್ರೆ ಅಸಲಿ ಮ್ಯಾಟರ್ ಬೇರೇನೇ ಇದೆ. ಲೋಕಾ ಚಿತ್ರದಲ್ಲಿ ನಮ್ಮ ಬೆಂಗಳೂರಿನ ಹುಡುಗಿಯರನ್ನ ಡಗಾರ್‌ಗಳು ಅಂತ ಆಕ್ಷೇಪಾರ್ಹ ಪದ ಬಳಕೆ ಮಾಡಿ ನಿಂದಿಸಿದೆ ಚಿತ್ರತಂಡ. ಆಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಚಿತ್ರತಂಡ, ಕೊನೆಗೆ ಕ್ಷಮೆ ಕೋರಿ ಪತ್ರ ಕೂಡ ಪೋಸ್ಟ್ ಮಾಡಿತ್ತು. ಆ ಪದವನ್ನು ನಂತರ ಡೇಂಜರ್ ಅಂತ ಬದಲಾಯಿಸಿದ್ರು ಕೂಡ. ಆದ್ರೆ, ಕನ್ನಡಿಗರನ್ನ ಅವಮಾನಿಸಿದ, ಕನ್ನಡದ ಹೆಣ್ಣು ಮಕ್ಕಳ ಬಗ್ಗೆ ಕೀಳಾಗಿ ಮಾತಾಡಿದ ತಂಡವನ್ನು ಪ್ರಶಂಸಿಸುವ ಪ್ರಮೇಯವಾದ್ರೂ ಏನಿತ್ತು ಅನ್ನೋದು ಯಕ್ಷ ಪ್ರಶ್ನೆಯಾಗಿದೆ.
ಸೈಮಾ ಅವಾರ್ಡ್ ಫಂಕ್ಷನ್‌ನಲ್ಲಿ ಸುಮಲತಾಗೆ ಅಗೌರವ..?!
ಹಿರಿಯ ನಟಿಯನ್ನ ಮಾತನಾಡಿಸದ ರಶ್ಮಿಕಾ ನಡೆಗೆ ಆಕ್ರೋಶ
ಇತ್ತೀಚೆಗೆ ದುಬೈನಲ್ಲಿ ಸೈಮಾ ಅವಾರ್ಡ್ ಫಂಕ್ಷನ್ ನಡೀತು. ಅಲ್ಲಿಗೆ ಮುಖ್ಯ ಅತಿಥಿಯಾಗಿ ಮಾಜಿ ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಶ್ ತೆರಳಿದ್ದರು. ಅದೇ ಕಾರ್ಯಕ್ರಮದಲ್ಲಿ ಪುಷ್ಪ-2 ಚಿತ್ರದ ನಟನೆಗಾಗಿ ಬೆಸ್ಟ್ ಆ್ಯಕ್ಟ್ರೆಸ್ ಅವಾರ್ಡ್ ಪಡೆಯಲು ನ್ಯಾಷನಲ್ ಕ್ರಶ್ ರಶ್ಮಿಕಾ ಕೂಡ ಆಗಮಿಸಿದ್ರು. ಮೊದಲ ಸಾಲಿನಲ್ಲೇ ಕೂತಿದ್ದ ಸುಮಲತಾ, ಪಕ್ಕದಲ್ಲೇ ಕೂತಿದ್ದ ಅಲ್ಲು ಅರ್ಜುನ್ ಜೊತೆ ಮಾತಾಡ್ತಿದ್ರು. ಕಾರ್ಯಕ್ರಮಕ್ಕೆ ಆಗಮಿಸಿದ ರಶ್ಮಿಕಾ, ನೇರವಾಗಿ ಬಂದು ಅಲ್ಲು ಅರ್ಜುನ್‌ಗೆ ಅಪ್ಪುಗೆ ನೀಡಿ, ಹಲ್ಲು ಕಿಸಿದು ಮಾತಾಡಿದ್ರು. ಪಕ್ಕದಲ್ಲೇ ಇದ್ದ ಸುಮಲತಾರನ್ನ ಕ್ಯಾರೆ ಅನ್ನಲಿಲ್ಲ.
ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ನಮ್ಮ ಕನ್ನಡದ ಹಿರಿಯ ನಟಿಗೆ ರಶ್ಮಿಕಾ ಅಗೌರವ ತೋರಿದ್ದರ ಬಗ್ಗೆ ತುಂಬಾ ಜನ ಪ್ರಶ್ನಿಸುತ್ತಿದ್ದಾರೆ. ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದರೂ, ನಮ್ಮೂರಿನವರನ್ನ ಹಾಗೂ ನಮ್ಮ ಚಿತ್ರರಂಗದ ಹಿರಿಯ ನಟಿಯರನ್ನ ಈ ರೀತಿ ಕಡೆಗಣಿಸಿದ್ದು ಮಾತ್ರ ರಶ್ಮಿಕಾಗೆ ಶೋಭೆ ತರುವಂತದ್ದಲ್ಲ.